ಮಕ್ಕಳ ಒಳಿತಿಗಾಗಿ ಪ್ರಾರ್ಥಿಸುವ ವ್ರತದ ಅಂಗವಾಗಿ ಪುಣ್ಯಸ್ನಾನ : 37 ಮಕ್ಕಳು ಸೇರಿ 43 ಜನ ಸಾವು!

| Published : Sep 27 2024, 01:21 AM IST / Updated: Sep 27 2024, 06:39 AM IST

ಸಾರಾಂಶ

ಬಿಹಾರದಲ್ಲಿ ಜೀವಿತಪುತ್ರಿಕಾ ವ್ರತದ ಅಂಗವಾಗಿ ನದಿಗಳಲ್ಲಿ ಪುಣ್ಯಸ್ನಾನ ಮಾಡುವಾಗ 43 ಮಂದಿ ಮು drowningಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 37 ಮಕ್ಕಳು ಸೇರಿದ್ದು, ಈ ದುರಂತವು ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದೆ. ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಪಟನಾ: ಮಕ್ಕಳ ಒಳಿತಿಗಾಗಿ ಪ್ರಾರ್ಥಿಸುವ ವ್ರತದ ಅಂಗವಾಗಿ ನದಿಗಳಲ್ಲಿ ಪುಣ್ಯಸ್ನಾನ ಮಾಡುವಾಗ 43 ಮಂದಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ನಡೆದಿದೆ. ಮೃತರಲ್ಲಿ 37 ಮಕ್ಕಳೂ ಸೇರಿದ್ದಾರೆ.

ತಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬಿಹಾರದಲ್ಲಿ ಮಹಿಳೆಯರು ‘ಜೀವಿತಪುತ್ರಿಕಾ’ ಎಂಬ ವ್ರತ ಮಾಡುತ್ತಾರೆ. ಒಂದು ದಿನದ ಉಪವಾಸ ಮಾಡಿ, ನದಿಯಲ್ಲಿ ಮಕ್ಕಳೊಂದಿಗೆ ಪುಣ್ಯಸ್ನಾನ ಮಾಡುವ ಈ ವ್ರತ ಬುಧವಾರ ನಡೆಯಿತು. ವ್ರತದ ಅಂಗವಾಗಿ ನದಿ ಅಥವಾ ಕೆರೆಯಲ್ಲಿ ಸ್ನಾನ ಮಾಡುವಾಗ ಮಕ್ಕಳು ಹಾಗೂ ಮಹಿಳೆಯರು ಕೊಚ್ಚಿಕೊಂಡು ಹೋಗಿ 43 ಮಂದಿ ಮೃತಪಟ್ಟಿದ್ದಾರೆ. ಇನ್ನೂ 3 ಮಂದಿ ನಾಪತ್ತೆಯಾಗಿದ್ದು, ಅವರೂ ಮೃತಪಟ್ಟಿರುವ ಶಂಕೆಯಿದೆ.

ನಳಂದಾ, ಔರಂಗಾಬಾದ್, ಚಂಪಾರಣ್‌, ವೈಶಾಲಿ, ಪಟನಾ, ಸರಣ್‌ ಸೇರಿದಂತೆ 15 ಜಿಲ್ಲೆಗಳಲ್ಲಿ ಸಾವು ಸಂಭವಿಸಿದೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ 4 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

‘ಜೀವಿತಪುತ್ರಿಕಾ’ ವ್ರತವು ಬಿಹಾರದಲ್ಲಿ ಆಚರಿಸಲ್ಪಡುವ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ.