ಸಾರಾಂಶ
ಮಕ್ಕಳನ್ನು ದೇವಸ್ಥಾನಕ್ಕೆ ಕರೆದೊಯ್ದು ಆಣೆ ಮಾಡಿದ ಹೇಯ ಘಟನೆ ಬಿಹಾರದ ಶಾಲಾ ಶಿಕ್ಷಕಿಯಿಂದ ನಡೆದಿದೆ. ಕೂಡಲೇ ಶಿಕ್ಷಕಿಗೆ ಎತ್ತಂಗಡಿ ಶಿಕ್ಷೆ ನೀಡಲಾಗಿದೆ.
ಪಟನಾ: ವಿದ್ಯಾರ್ಥಿಗಳು ತನ್ನ 35 ರು.ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಿದ ಶಿಕ್ಷಕಿಯೊಬ್ಬರು, ಮಕ್ಕಳನ್ನೆಲ್ಲ ದೇವಸ್ಥಾನಕ್ಕೆ ಕರೆದೊಯ್ದು ಹಣ ಕದ್ದಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಿಸಿದ ಹೇಯ ಘಟನೆ ಬಿಹಾರದಲ್ಲಿ ನಡೆದಿದೆ.
ಬಂಕಾ ಜಿಲ್ಲೆಯ ಅಸ್ಮಾನಿಚಾಕ್ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯ ಶಿಕ್ಷಕಿ ನೀತು ಕುಮಾರಿ ಇಂಥದ್ದೊಂದು ವಿಚಿತ್ರ ವರ್ತನೆ ತೋರಿ ವಿದ್ಯಾರ್ಥಿಗಳಿಗೆ ಅವಮಾನ ಮಾಡಿದ್ದಾರೆ. ಘಟನೆ ಬೆನ್ನಲ್ಲೇ ಶಿಕ್ಷಣ ಇಲಾಖೆಯು, ಕಳೆದ ಶುಕ್ರವಾರ ಈ ಶಿಕ್ಷಕಿಯನ್ನು ಬೇರೆಡೆ ವರ್ಗಾವಣೆ ಶಿಕ್ಷೆಗೆ ಗುರಿ ಮಾಡಿದೆ.ಆಗಿದ್ದೇನು?:ಬುಧವಾರದಂದು ನೀತು, ತನ್ನ ಬ್ಯಾಗ್‌ನಲ್ಲಿರುವ ನೀರಿನ ಬಾಟಲಿಯನ್ನು ತೆಗೆದುಕೊಂಡು ಬರುವಂತೆ ವಿದ್ಯಾರ್ಥಿನಿಯೊಬ್ಬಳಿಗೆ ಸೂಚಿಸಿದ್ದಾರೆ. ಬಳಿಕ ತನ್ನ ಬ್ಯಾಗ್‌ನಲ್ಲಿದ್ದ 35 ರು. ಕಾಣೆಯಾಗಿದೆ ಎಂದು ಆರೋಪಿಸಿ ಈ ಬಗ್ಗೆ ಮಕ್ಕಳಲ್ಲಿ ವಿಚಾರಿಸಿದ್ದಾರೆ.
ಯಾರೂ ಆ ಹಣವನ್ನು ತೆಗದುಕೊಂಡಿದ್ದಾಗಿ ಹೇಳಿಲ್ಲ. ಕೂಡಲೇ ನೀತು ಎಲ್ಲರನ್ನೂ ದೇವಸ್ಥಾನಕ್ಕೆ ಕರೆದೊಯ್ದು ‘ಹಣ ಕದ್ದಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಿ’ ಎಂದು ಪ್ರಮಾಣ ಮಾಡಿಸಿದ್ದಾರೆ. ಮಕ್ಕಳನ್ನು ಶಿಕ್ಷಕಿ ಅವಮಾನಿಸಿದ್ದಾರೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮರುದಿನ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಣ ಇಲಾಖೆಯೂ ಘಟನೆಯನ್ನು ಖಂಡಿಸಿ ಬಳಿಕ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.