ಸಾರಾಂಶ
ಪಟನಾ: ಮಹತ್ವದ ಹಾಗೂ ಅಚ್ಚರಿಯ ಬೆಳವಣಿಗೆಯಲ್ಲಿ, ಬಿಹಾರದ ಐತಿಹಾಸಿಕ ನಗರವಾದ ಗಯಾವನ್ನು ‘ಗಯಾ ಜಿ’ ಎಂದು ಮರುನಾಮಕರಣ ಮಾಡಲಾಗಿದೆ. ಸಿಎಂ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್. ಸಿದ್ಧಾರ್ಥ್, ‘ಪಟ್ಟಣದ ಐತಿಹಾಸಿಕ, ಧಾರ್ಮಿಕ ಮಹತ್ವ ಮತ್ತು ಸ್ಥಳೀಯರ ಭಾವನೆಗಳು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಈ ನಿರ್ಧಾರವನ್ನು ಜೆಡಿಯು, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸ್ವಾಗತಿಸಿ, ಶ್ಲಾಘಿಸಿದ್ದಾರೆ. ಫಲ್ಗು ನದಿಯ ತಟದಲ್ಲಿರುವ ಗಯಾ ಪಟ್ಟಣಕ್ಕೆ ಪಿತೃಪಕ್ಷದಲ್ಲಿ ಹಿಂದೂಗಳು ಆಗಮಿಸಿ ತಮ್ಮ ಪೂರ್ವಿಕರಿಗೆ ಪಿಂಡ ಪ್ರದಾನ ಮಾಡುತ್ತಾರೆ. ಇಲ್ಲಿ ವಿಷ್ಣುಪಾದ ದೇವಾಲಯವಿದ್ದು, ಗಯಾಸುರನೆಂಬ ರಾಕ್ಷಸನ ಎದೆಯ ಮೇಲೆ ವಿಷ್ಣು ಪಾದವನ್ನಿಟ್ಟು ಆತನನ್ನು ಕೊಂದ ಜಾಗ ಅದೆಂಬ ನಂಬಿಕೆಯೂ ಇದೆ. ಹಿಂದಿ ಭಾಷೆಯಲ್ಲಿ ಜಿ ಪದವನ್ನು ಸಾಮಾನ್ಯವಾಗಿ ವ್ಯಕ್ತಿಗಳಿಗೆ ಗೌರವ ಸೂಚಿಸುವ ಸಲುವಾಗಿ ಅವರ ಹೆಸರಿನ ಮುಂದೆ ಬಳಸಲಾಗುತ್ತದೆ. ಅದೀಗ ಗೌರವಾರ್ಥವಾಗಿ ಗಯಾ ಪಟ್ಟಣದ ಹೆಸರಿನೊಂದಿಗೂ ಬಳಕೆಯಾಗಲಿದೆ.