ಸಾರಾಂಶ
ಅಮರಾವತಿ: ತಿರುಪತಿ ಲಾಡು ಪ್ರಸಾದದಲ್ಲಿ ತುಪ್ಪದ ಬದಲು ಆಂಧ್ರಪ್ರದೇಶದ ಹಿಂದಿನ ವೈಎಸ್ಸಾರ್ ಕಾಂಗ್ರೆಸ್ ಸರ್ಕಾರ ಪ್ರಾಣಿಯ ಕೊಬ್ಬು ಬಳಸುತ್ತಿತ್ತು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪ ಭಾರೀ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಚಂದ್ರಬಾಬು ನಾಯ್ಡು ಆರೋಪವನ್ನು ತಿರುಮಲ ತಿರುಪತಿ ದೇಗುಲ ಸಮಿತಿ (ಟಿಟಿಡಿ) ಮಾಜಿ ಅಧ್ಯಕ್ಷ, ಹಾಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ವೈ.ವಿ. ಸುಬ್ಬಾರೆಡ್ಡಿ ತಿರಸ್ಕರಿಸಿದ್ದಾರೆ. ‘ಈ ಬಗ್ಗೆ ನಾನು ತಿಮ್ಮಪ್ಪನ ಮುಂದೆ ಆಣೆ ಪ್ರಮಾಣಕ್ಕೆ ಸಿದ್ಧ, ನೀವು ಸಿದ್ಧರಿದ್ದೀರಾ?’ ಎಂದು ನಾಯ್ಡುಗೆ ಸವಾಲು ಹಾಕಿದ್ದಾರೆ.
ಬುಧವಾರ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಶ್ರೀವಾರಿ ಲಡ್ಡುವನ್ನು ಲಕ್ಷಾಂತರ ಭಕ್ತರು ಪವಿತ್ರ ಎಂದು ನಂಬಿದ್ದಾರೆ. ಆದರೆ ಹಿಂದಿನ ಜಗನ್ ಸರ್ಕಾರ ಇಂಥ ಲಡ್ಡು ತಯಾರಿಕೆಗೆ ಕಳಪೆ ವಸ್ತುಗಳನ್ನು ಬಳಕೆ ಮಾಡುತ್ತಿತ್ತು. ಲಡ್ಡು ತಯಾರಿಸಲು ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು. ಈ ಮೂಲಕ ಭಕ್ತರ ನಂಬಿಕೆಗೆ ಭಾರೀ ಘಾಸಿ ಉಂಟು ಮಾಡುತ್ತಿತ್ತು. ಆದರೆ ನಾವು ಇದೀಗ ಶುದ್ಧ ತುಪ್ಪ ಬಳಸಿ ಲಡ್ಡು ತಯಾರಿಸುತ್ತಿದ್ದೇವೆ ಎಂದಿದ್ದರು.
ನಾಯ್ಡು ಆರೋಪಕ್ಕೆ ಗುರುವಾರ ಪ್ರತಿಕ್ರಿಯೆ ನೀಡಿದ ರೆಡ್ಡಿ, ‘ನಾಯ್ಡು ಆರೋಪ ಸುಳ್ಳು ಮತ್ತು ಆಧಾರರಹಿತ. ಇದು ಅನೈತಿಕ ರಾಜಕೀಯ ತಂತ್ರ. ಇಂಥ ಆರೋಪವನ್ನು ಊಹಿಸಿಕೊಳ್ಳಲೂ ಆಗದು. ನಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ತಿರುಮಲ ದೇವಸ್ಥಾನದಲ್ಲಿ ಪ್ರಮಾಣ ಮಾಡಲೂ ಸಿದ್ಧ. ನಾಯ್ಡು ಕೂಡ ತಾವು ಮಾಡಿದ ಆರೋಪ ನಿಜ ಎಂದು ಆಣೆ-ಪ್ರಮಾಣಕ್ಕೆ ಸಿದ್ಧರಿದ್ದಾರಾ?’ ಎಂದರು.
ಅಲ್ಲದೆ ಆರೋಪ ಸಾಬೀತುಪಡಿಸಲು ವಿಫಲರಾದರೆ ನಾಯ್ಡು ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ.ಈ ನಡುವೆ, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಮಾತನಾಡಿ, ಈ ಬಗ್ಗೆ ಸಿಬಿಐ ತನಿಖೆಗೆ ಅಗ್ರಹಿಸಿದ್ದಾರೆ. ಬಿಜೆಪಿ ಕೂಡಾ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಹಿಂದೂಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದಿದೆ. ಇನ್ನೊಂದೆಡೆ ಕೊಬ್ಬು ಬಳಸಿದ ವೈಎಸ್ಸಾರ್ ನಾಯಕರ ವಿರುದ್ಧ ಕಠಿಣ ಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ನಾಯಕ ಸುನೀಲ್ ಬನ್ಸಲ್ ಆಗ್ರಹಿಸಿದ್ದಾರೆ.
ಇತ್ತೀಚಿನ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಇದೇ ರೀತಿಯ ಆರೋಪ ಮಾಡಲಾಗಿತ್ತು. ಟಿಟಿಡಿ ಹುದ್ದೆಗಳಿಗೆ ಕ್ರೈಸ್ತರನ್ನು ನೇಮಿಸಲಾಗಿದೆ ಎಂದು ಟಿಡಿಪಿ, ಜನಸೇನಾ ಪಕ್ಷ ಮತ್ತು ಬಿಜೆಪಿ ಆರೋಪಿಸಿದ್ದವು.