ವಿದೇಶಗಳಿಂದ ನಿರ್ವಹಿಸಲ್ಪಡುತ್ತಿರುವ ಜಾಲತಾಣ ಖಾತೆ ಬಳಸಿಕೊಂಡು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್‌ ನಾಯಕರು ಯತ್ನಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಎಡಪಂಥೀಯರ ನಿರ್ದೇಶನದಂತೆ ಈ ಕೆಲಸ ಮಾಡಲಾಗುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿ: ‘ವಿದೇಶಗಳಿಂದ ನಿರ್ವಹಿಸಲ್ಪಡುತ್ತಿರುವ ಜಾಲತಾಣ ಖಾತೆ ಬಳಸಿಕೊಂಡು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್‌ ನಾಯಕರು ಯತ್ನಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಎಡಪಂಥೀಯರ ನಿರ್ದೇಶನದಂತೆ ಈ ಕೆಲಸ ಮಾಡಲಾಗುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಕೂಡ, ‘ಬಿಜೆಪಿಯ ಕೆಲ ಎಕ್ಸ್‌ ಖಾತೆಗಳನ್ನೂ ವಿದೇಶದಿಂದ ಹ್ಯಾಂಡಲ್‌ ಮಾಡಲಾಗುತ್ತಿದೆ’ ಎಂದು ತಿರುಗೇಟು ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, ‘ಚುನಾವಣಾ ಆಯೋಗ, ಬಿಜೆಪಿ, ಆರ್‌ಎಸ್‌ಎಸ್‌, ಪ್ರಧಾನಿ ನರೇಂದ್ರ ಮೋದಿ ವಿರುದ್ಧ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಾಪುರ, ಅಮೆರಿಕದಂತಹ ದೇಶಗಳಲ್ಲಿ ರಚಿಸಲಾಗಿರುವ ಎಕ್ಸ್‌ ಖಾತೆಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಖಾತೆ ಸೃಷ್ಟಿಯಾದ ಸ್ಥಳ, ದಿನಾಂಕದಂತಹ ಮಾಹಿತಿ

ಇದನ್ನು ಪತ್ತೆ ಮಾಡಿದ ಬಗೆಯನ್ನೂ ವಿವರಿಸುತ್ತಾ, ‘ಖಾತೆ ಸೃಷ್ಟಿಯಾದ ಸ್ಥಳ, ದಿನಾಂಕದಂತಹ ಮಾಹಿತಿಗಳನ್ನು ನೋಡಬಹುದಾದ ಸೌಲಭ್ಯವನ್ನು ಎಕ್ಸ್‌ ಕೆಲ ದಿನಗಳ ಹಿಂದೆ ಪರಿಚಯಿಸಿದೆ. ಇದರ ಮೂಲಕ, ಪವನ್‌ ಖೇರಾರ ಖಾತೆ ಅಮೆರಿಕದಲ್ಲಿರುವುದು ಪತ್ತೆಯಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್‌ನ ಖಾತೆ ಇರ್ಲೆಂಡ್‌ನಲ್ಲಿತ್ತು. ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಖಾತೆಗೆ ಥಾಯ್ಲೆಂಡ್‌ ನಂಟಿದೆ. ಆಲ್ಟ್‌ ನ್ಯೂಸ್‌ ಅಮೆರಿಕದಿಂದ ಕೆಲಸ ಮಾಡುತ್ತಿದೆ’ ಎಂದರು. ಜತೆಗೆ, ‘ಆಗಾಗ ವಿದೇಶಗಳಿಗೆ ಹೋಗಿ ಭಾರತ ವಿರೋಧಿ ಭಾಷಣ ಮಾಡುವ ರಾಹುಲ್‌, ಇವುಗಳನ್ನು ಬಳಸಿಕೊಂಡು ದೇಶದಲ್ಲಿ ನಾಗರಿಕ ದಂಗೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ’ ಎಂಬ ಗಂಭೀರ ಆಪಾದನೆಯನ್ನೂ ಪಾತ್ರಾ ಹೊರಿಸಿದ್ದಾರೆ.

ಕಾಂಗ್ರೆಸ್‌ ತಿರುಗೇಟು:

ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌, ‘ಗುಜರಾತ್‌ನ ಬಿಜೆಪಿ, ಡಿಡಿ ನ್ಯೂಸ್‌, ಸ್ಟಾರ್ಟ್‌ಅಪ್‌ ಇಂಡಿಯಾ ಖಾತೆಗಳು ಅಮೆರಿಕ ಹಾಗೂ ಐರ್ಲೆಂಡ್‌ನಲ್ಲಿ ಪತ್ತೆಯಾಗಿದೆ. ಅದಾನಿ ಸಮೂಹದ ಎಕ್ಸ್‌ ಖಾತೆ ಜರ್ಮನಿಯಿಂದ ನಿರ್ವಹಿಸಲ್ಪಡುತ್ತಿದೆ. ಇನ್ನೂ ಕೆಲ ಖಾತೆಗಳು ಮಲೇಷಿಯಾ, ದಕ್ಷಿಣ ಆಫ್ರಿಕಾದಲ್ಲಿಯೂ ಇವೆ’ ಎಂದು ಆರೋಪಿಸಿದೆ.

ಜಾಲತಾಣ ಬಳಸಿ ದೇಶ ವಿರೋಧಿ ಅಭಿಪ್ರಾಯ ರೂಪಿಸಲು ಯತ್ನ

ವಿದೇಶಿ ಹ್ಯಾಂಡ್ಲರ್‌ ಬಳಸಿಕೊಂಡು ಕಾಂಗ್ರೆಸ್‌ ನಾಯಕರ ಕೆಲಸ

ದೇಶದಲ್ಲಿ ನಾಗರಿಕ ದಂಗೆ ಸೃಷ್ಟಿಗೆ ರಾಹುಲ್‌ ಯತ್ನ: ಸಂಬಿತ್‌ ಪಾತ್ರ

ಬಿಜೆಪಿಯ ಖಾತೆಗಳು ಅಮೆರಿಕ, ಐರ್ಲೆಂಡ್‌ನಲ್ಲಿ ಪತ್ತೆ: ಕಾಂಗ್ರೆಸ್‌ ಕಿಡಿ