ಸಾರಾಂಶ
ನವದೆಹಲಿ: ಅಮೆರಿಕದ ‘ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಶನ್ ರಿಪೋರ್ಟಿಂಗ್ ಪ್ರಾಜೆಕ್ಟ್’ (ಒಸಿಸಿಆರ್‌ಪಿ) ವರದಿಗಳನ್ನು ಉಲ್ಲೇಖಿಸಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಹಿಂದೆ ಹಲವು ಗುರುತರ ಆರೋಪಗಳನ್ನು ಮಾಡಿದ್ದರು.
ಈಗ ಫ್ರೆಂಚ್ ಮಾಧ್ಯಮ ಸಂಸ್ಥೆಯಾದ ‘ಮೀಡಿಯಾಪಾರ್ಟ್’ ತನಿಖಾ ವರದಿಯೊಂದನ್ನು ಪ್ರಕಟಿಸಿದ್ದು, ‘ಒಸಿಸಿಆರ್‌ಪಿ ಸ್ವತಂತ್ರ ಮಾಧ್ಯಮ ಸಂಸ್ಥೆಯಲ್ಲ. ಅಮೆರಿಕ ಸರ್ಕಾರದಿಂದ, ಶತಕೋಟ್ಯಧಿಪತಿ ಜಾರ್ಜ್ ಸೊರೋಸ್ ಅವರಿಂದ ಹಾಗೂ ಅಲ್ಲಿನ ಸಂಘ-ಸಂಸ್ಥೆಗಳಿಂದ, 2007ರಲ್ಲಿ ಸ್ಥಾಪನೆ ಆದಾಗಿನಿಂದ ಈವರೆಗೆ 47 ದಶಲಕ್ಷ ಡಾಲರ್ ಹಣವನ್ನು ಸ್ವೀಕರಿಸಿದೆ.
ಇದು ತನ್ನದೇ ಆದ ಅಜೆಂಡಾ ಹೊಂದಿ ವರದಿಗಾರಿಕೆ ಮಾಡುತ್ತದೆ’ ಎಂದು ಆರೋಪಿಸಿದೆ.ಈ ಆರೋಪವು ಭಾರತದ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಬಿರುಗಾಳಿ ಎಬ್ಬಿಸಿದೆ. ಈವರೆಗೆ ಮೋದಿ-ಅದಾನಿ ಸ್ನೇಹ ಉಲ್ಲೇಖಿಸಿ ‘ಮೋದಿ-ಅದಾನಿ ಏಕ್ ಹೈ’ ಎಂದು ವಾಗ್ದಾಳಿ ನಡೆಸುತ್ತಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ ಹಾಗೂ ‘ರಾಹುಲ್ ಗಾಂಧಿ ಅತ್ಯುನ್ನತ ದೇಶ್ರೋಹಿ, ‘ರಾಹುಲ್-ಸೊರೋಸ್ ಏಕ್ ಹೈ’ ಹಾಗೂ ‘ಒಸಿಸಿಆರ್‌ಪಿ-ರಾಹುಲ್ ಗಾಂಧಿ ಒಂದೇ ದೇಹ 2 ಆತ್ಮ’ ಎಂಬ ಹೊಸ ಉದ್ಘೋಷಗಳನ್ನು ಕಂಡು ಹಿಡಿದು ಪ್ರಹಾರ ನಡೆಸಿದೆ.ಇದೇ ವಿಷಯವನ್ನು ಬಿಜೆಪಿ ಸದಸ್ಯರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ ಕಾರಣ ಉಭಯ ಸದನಗಳ ಕಲಾಪ ಸರಿಯಾಗಿ ನಡೆಯದೇ ಪದೇ ಪದೇ ಮುಂದೂಡಿಕೆ ಆಗಿದೆ.
ಬಿಜೆಪಿ ಆಕ್ರೋಶ:
ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹಾಗೂ ಕೆ. ಲಕ್ಷ್ಮಣ, ‘ರಾಹುಲ್ ಅವರು ಅಮೆರಿಕ ಸಂಸ್ಥೆಗಳು, ಅಮೆರಿಕದ ಶತಕೋಟ್ಯಧೀಶ್ವರ ಜಾರ್ಜ್ ಸೊರೋಸ್ ಹಾಗೂ ಒಆರ್‌ಆರ್‌ಸಿಪಿಯಂಥ ‘ಅಪಾಯಕಾರಿ ತ್ರಿವಳಿ’ಗಳ ಅಣತಿಯಂತೆ ನಡೆದುಕೊಳ್ಳುತ್ತಾರೆ ಹಾಗೂ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ, ಅವರೊಬ್ಬ ‘ಅತ್ಯುನ್ನತ ದೇಶದ್ರೋಹಿ’ ಎಂದು ವಾಗ್ದಾಳಿ ನಡೆಸಿದರು
.ಅಲ್ಲದೆ, ‘ರಾಹುಲ್-ಸೊರೋಸ್ ಏಕ್ ಹೈ’ ಹಾಗೂ ‘ಒಸಿಸಿಆರ್‌ಪಿ-ರಾಹುಲ್ ಗಾಂಧಿ ಒಂದೇ ದೇಹ 2 ಆತ್ಮ’ ಎಂಬ ಹೊಸ ಉದ್ಘೋಷಗಳೊಂದಿಗೆ ಪ್ರಹಾರ ಮಾಡಿದರು.
‘ಒಆರ್‌ಆರ್‌ಸಿಪಿ ತನ್ನ ಶೇ.70ರಷ್ಟು ಸಂಪನ್ಮೂಲವನ್ನು ಒಂದೇ ಮೂಲದಿಂದ ಪಡೆದಿದೆ. ಅಮೆರಿಕದ ಮೋದಿ ವಿರೋಧಿ ಶತಕೋಟ್ಯಧೀಶ ಸೊರೋಸ್ ಸೇರಿ ಅನೇಕರು ಇದಕ್ಕೆ ಹಣ ನೀಡಿದ್ದಾರೆ. ಹೀಗಾಗಿ ಇದು ತಟಸ್ಥ ಮಾಧ್ಯಮ ಆಗಲು ಸಾಧ್ಯವಿಲ್ಲ. ಇಂಥ ಒಸಿಸಿಆರ್‌ಪಿ ವರದಿಗಳ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಲು ಗಾಂಧಿ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಅವರೊಬ್ಬ ಅತ್ಯುನ್ನತ ದ್ರೋಹಿ. ಈ ಮಾತನ್ನು ಹೇಳಲು ನಾನು ಹೆದರುವುದಿಲ್ಲ. ವಿರೋಧ ಪಕ್ಷದ ನಾಯಕನನ್ನು ದೇಶದ್ರೋಹಿ ಎಂದು ಕರೆಯಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ಪಾತ್ರ ಕಿಡಿಕಾರಿದರು.
ಲೋಕಸಭೆ- ರಾಜ್ಯಸಭೆಯಲ್ಲಿ ಕೋಲಾಹಲ:
ಇದೇ ವೇಳೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಕ್ರಮವಾಗಿ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಹಾಗೂ ಸುಧಾಂಶು ತ್ರಿವೇದಿ ಅವರು ಈ ವಿಷಯ ಪ್ರಸ್ತಾಪಿಸಿ ‘ವಿದೇಶಗಳಿಂದ ಭಾರತದ ವಿರುದ್ಧ ಸಂಚು ನಡೆದಿದೆ. ಇದಕ್ಕೆ ರಾಹುಲ್ ಗಾಂಧಿ ಸಾಥ್ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು ಹಾಗೂ ಹಿಂಡನ್‌ಬರ್ಗ್ ವರದಿ, ಪೆಗಾಸಸ್, ಜಾರ್ಜ್ ಸೊರೋಸ್ ಆರೋಪಗಳು, ಕೊರೋನಾ ಲಸಿಕೆ ಕುರಿತ ಒಸಿಸಿಆರ್‌ಪಿ ವರದಿಗಳು, ಕೃಷಿ ಹೋರಾಟದ ವಿಷಯದಲ್ಲಿ ಭಾರತ ವಿರೋಧಿ ವಿದೇಶಿ ವರದಿಗಳು- ಇತ್ಯಾದಿಗಳನ್ನು ಉಲ್ಲೇಖಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಒ ವ್ಯಕ್ತಪಡಿಸಿದ ಕಾರಣ ಉಭಯ ಸದನಗಳ ಕಲಾಪ ಸುಗಮವಾಗಿ ಸಾಗದೇ ಪದೇ ಪದೇ ಮುಂದೂಡಿಕೆ ಆಯಿತು.
ಕಾಂಗ್ರೆಸ್ ಆಕ್ರೋಶ:
ರಾಹುಲ್ ಗಾಂಧಿ ಒಬ್ಬ ಸಂಸದ. ಅವರನ್ನು ದೇಶದ್ರೋಹಿ ಎಂದು ಪಾತ್ರ ಕರೆದಿದ್ದು ಅಕ್ಷಮ್ಯ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಲೋಕಸಭೆ ಸ್ಪೀಕರ್‌ಗೆ ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್ ಪತ್ರ ಬರೆದಿದ್ದಾರೆ.
ರಾಹುಲ್ ಉಲ್ಲೇಖಿಸಿದ್ದ ಒಸಿಸಿಆರ್‌ಪಿ ವರದಿಗಳು ಯಾವುವು?
- ಭಾರತ್ ಬಯೋಟೆಕ್ ಸಿದ್ಧಪಡಿಸಿದ್ದ ಕೋವಿಡ್ ಲಸಿಕೆಯಾದ ಕೋವಾಕ್ಸಿನ್‌ಗೆ ಬ್ರೆಜಿಲ್ ಮೊದಲು ಬೇಡಿಕೆ ಇಟ್ಟಿತ್ತು. ನಂತರ 324 ಮಿಲಿಯನ್ ಡಾಲರ್ ಆರ್ಡರ್ ಅನ್ನು ರದ್ದುಗೊಳಿಸಿತ್ತು. ಇದಕ್ಕೆ ಮೋದಿ ಸರ್ಕಾರದ ವೈಫಲ್ಯ ಕಾರಣ ಎಂದು 2021ರ ಜುಲೈನಲ್ಲಿ ಒಸಿಸಿಆರ್‌ಪಿ ವರದಿ ಉಲ್ಲೇಖಿಸಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.
- ಪೆಗಾಸಸ್ ಸ್ಪೈವೇರ್ ಬಳಸಿ ಭಾರತದ ವಿಪಕ್ಷ ನಾಯಕರು, ಪತ್ರಕರ್ತರ ಮೇಲೆ ಭಾರತ ಸರ್ಕಾರ ಗೂಢಚಾರಿಕೆ ನಡೆಸಿದೆ ಎಂದು ಒಸಿಸಿಆರ್‌ಪಿ ಈ ಹಿಂದೆ ವರದಿ ಮಾಡಿತ್ತು. ಇದನ್ನು ಉಲ್ಲೇಖಿಸ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ಸಾಕಷ್ಟು ವಾಕ್ ಪ್ರಹಾರ ಮಾಡಿದ್ದರು.