ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಸಮೋಸ ಕಳವು : ಸಿಐಡಿ ತನಿಖೆಗೆ

| Published : Nov 09 2024, 01:09 AM IST / Updated: Nov 09 2024, 04:50 AM IST

ಸಾರಾಂಶ

ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರಿಗೆಂದು ತಂದ ಸಮೋಸಾ ಹಾಗೂ ಕೇಕ್‌ಗಳನ್ನು ಪೊಲೀಸರು ತಿಂದು ಖಾಲಿ ಮಾಡಿದ ತಮಾಷೆಯ ಘಟನೆಯೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ, ಈ ಬಗ್ಗೆ ಸಿಐಡಿ ಮೂಲಕ ತನಿಖೆ ನಡೆಸುತ್ತಿದೆ.

 ಶಿಮ್ಲಾ : ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರಿಗೆಂದು ತಂದ ಸಮೋಸಾ ಹಾಗೂ ಕೇಕ್‌ಗಳನ್ನು ಪೊಲೀಸರು ತಿಂದು ಖಾಲಿ ಮಾಡಿದ ತಮಾಷೆಯ ಘಟನೆಯೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ, ಈ ಬಗ್ಗೆ ಸಿಐಡಿ ಮೂಲಕ ತನಿಖೆ ನಡೆಸುತ್ತಿದೆ.

ಅ.21ರಂದು ಮುಖ್ಯಮಂತ್ರಿಗಳು ಸಿಐಡಿ ಮುಖ್ಯ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಆತಿಥ್ಯಕ್ಕೆಂದು ಮೂರು ಬಾಕ್ಸ್‌ ಸಮೋಸಾ ಮತ್ತು ಕೇಕ್‌ ತರಿಸಲಾಗಿತ್ತು. ಆದರೆ, ಅವು ಸಿಎಂವರೆಗೆ ಹೋಗಲೇ ಇಲ್ಲ. ಬದಲಿಗೆ, ಸಿಐಡಿ ಕಚೇರಿಯ ಭದ್ರತಾ ಸಿಬ್ಬಂದಿಗೆ ಅವುಗಳನ್ನು ವಿತರಿಸಲಾಗಿತ್ತು. ಈ ಘಟನೆ ರಾಜ್ಯ ಪೊಲೀಸ್‌ ಇಲಾಖೆಯ ಮುಖ್ಯಸ್ಥರನ್ನು ಸಿಟ್ಟಿಗೇಳಿಸಿದ್ದು, ಅವರು ಸಿಐಡಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಆದರೆ ಈ ಘಟನೆಯು ಹಿಮಾಚಲದಲ್ಲೀಗ ತಮಾಷೆಯ ಸರಕಾಗಿ ಪರಿಣಮಿಸಿದೆ. ‘ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದೂ ನೆಟ್ಟಗಿಲ್ಲ. ಸಮೋಸಾ ಬಗ್ಗೆ ತನಿಖೆಗೆ ಆದೇಶ ನೀಡುವ ಮೂಲಕ ಸರ್ಕಾರ ನಗೆಪಾಟಲಿಗೆ ಗುರಿಯಾಗಿದೆ. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವುದನ್ನು ಬಿಟ್ಟು ಕ್ಷುಲ್ಲಕ ವಿಷಯಗಳ ಬಗ್ಗೆ ಸಿಎಂ ತಲೆಕೆಡಿಸಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತ್ಪಾಲ್‌ ಸತ್ತಿ ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವುದರಿಂದ ಮುಜುಗರಕ್ಕೆ ಗುರಿಯಾಗಿರುವ ಮುಖ್ಯಮಂತ್ರಿಗಳ ಕಚೇರಿ, ‘ಸಿಎಂ ಸಮೋಸಾ ತಿನ್ನುವುದಿಲ್ಲ. ಅವರು ಸಮೋಸಾ ಆರ್ಡರ್‌ ಮಾಡಿರಲೂ ಇಲ್ಲ. ಪೊಲೀಸರು ತಮ್ಮ ಇಲಾಖೆಯಲ್ಲಿ ದುರ್ನಡತೆ ತೋರಿದವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆಯೇ ಹೊರತು ಕಾಣೆಯಾದ ಸಮೋಸಾ ಬಗ್ಗೆ ಅಲ್ಲ’ ಎಂದು ಸ್ಪಷ್ಟನೆ ನೀಡಿದೆ.