ವಾರಾಣಸಿ ದೇಗುಲಗಳಿಂದ ಸಾಯಿ ಬಾಬಾ ಮೂರ್ತಿ ಸ್ಥಳಾಂತರ : ಮಹಾ ಬಿಜೆಪಿ, ಕಾಂಗ್ರೆಸ್‌ ಸಿಡಿಮಿಡಿ

| Published : Oct 03 2024, 01:22 AM IST / Updated: Oct 03 2024, 05:29 AM IST

ಸಾರಾಂಶ

ವಾರಾಣಸಿಯಲ್ಲಿನ ದೇಗುಲಗಳಿಂದ ಶಿರಡಿ ಸಾಯಿಬಾಬಾ ಮೂರ್ತಿ ತೆರವು ಮಾಡಿದ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮುಂಬೈ: ವಾರಾಣಸಿಯಲ್ಲಿನ ದೇಗುಲಗಳಿಂದ ಶಿರಡಿ ಸಾಯಿಬಾಬಾ ಮೂರ್ತಿ ತೆರವು ಮಾಡಿದ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನ್‌ಕುಳೆ, ಸಾಯಿಬಾಬಾ ಪೂಜ್ಯ ವ್ಯಕ್ತಿಯಾಗಿದ್ದು, ಅವರನ್ನು ಅವಮಾನಿಸಲು ಯಾರನ್ನು ಬಿಡಬಾರದು. ಅವರ ಪುತ್ಥಳಿ ತೆರವುಗೊಳಿಸುವ ಪ್ರಕ್ರಿಯೆ ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ನಾಯಕ ಬಾಳಾಸಾಹೆಬ್‌ ತೊರಾಟ್ ಮಾತನಾಡಿ, ಸಾಯಿ ಬಾಬಾ ಅವರು ಜಾತಿ, ಧರ್ಮ ಮತ್ತು ಜನಾಂಗವನ್ನು ಮೀರಿದವರು. ವಾರಾಣಾಸಿಯಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದು ಅಸಮಾಧಾನ ಹೊರಹಾಕಿದರು.ವಾರಾಣಸಿಯಲ್ಲಿ ಕೇವಲ ಶಿವನನ್ನು ಪೂಜಿಸಬೇಕು. ಧರ್ಮಗ್ರಂಥಗಳ ಪ್ರಕಾರ ಸಾಯಿಬಾಬಾ ಪೂಜೆ ನಿಷಿದ್ಧ. ಅದರ ಜ್ಞಾನವಿಲ್ಲದೆ ಪೂಜೆ ನಡೆಸಲಾಗುತ್ತಿತ್ತು ಎಂದು ಪ್ರತಿಮೆ ತೆರವು ಅಭಿಯಾನ ಆರಂಭಿಸಿರುವ ‘ಸನಾತನ ರಕ್ಷಕ ದಳ’ ವಾದಿಸುತ್ತಿದೆ.

==

ಹೋಟೆಲ್‌ನಲ್ಲಿ ಇದ್ದುಕೊಂಡು ಇಂದೋರ್‌ ಸಿಟಿಯಲ್ಲಿ ಭಿಕ್ಷೆ ಬೇಡುತ್ತಿದ್ದ ರಾಜಸ್ಥಾನಿಗರು

ಇಂದೋರ್‌: ಭಿಕ್ಷುಕರು ಎಂದರೆ ಹರಿದ ಬಟ್ಟೆ, ರಸ್ತೆ ಬದಿ, ಫ್ಲೈಓವರ್‌ ಕೆಳಗೆ, ಗುಡಿಸಲುಗಳಲ್ಲಿ ಉಳಿದುಕೊಂಡು ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಊಟವನ್ನು ಮಾಡುತ್ತಾರೆ ಎಂಬುದನ್ನು ನಾವು ನೋಡಿರುತ್ತೇವೆ. ಆದರೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಇದು ಭಿನ್ನವಾಗಿದೆ. ರಾಜಸ್ಥಾನದಿಂದ ಬಂದ ಭಿಕ್ಷುಕರು ಇಲ್ಲಿನ ಹೋಟೆಲ್‌ನಲ್ಲಿ ಉಳಿದುಕೊಂಡು ಭಿಕ್ಷೆ ಬೇಡುತ್ತಿದ್ದರು. ಇದನ್ನು ತಿಳಿದ ಜಿಲ್ಲಾಡಳಿತ, ಎಲ್ಲರನ್ನು ಕರೆಸಿ ಕೌನ್ಸಿಲಿಂಗ್ ಮಾಡಿ, ಮರಳಿ ರಾಜಸ್ಥಾನಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ದೇಶದ 10 ನಗರಗಳನ್ನು ಭಿಕ್ಷಾಟನೆ ಮುಕ್ತವನ್ನಾಗಿ ಮಾಡಲು ಆಯ್ಕೆ ಮಾಡಿದ್ದು, ಇಂದೋರ್‌ ಸಹ ಅದರಲ್ಲೊಂದಾಗಿದೆ.

==

ಎನ್‌ಸಿಪಿ ನಾಯಕ ಸುನಿಲ್‌ ಪ್ರಯಾಣಿಸಬೇಕಿದ್ದ ಕಾಪ್ಟರ್‌ ಪತನ: ಮೂವರ ಸಾವು

ಪುಣೆ: ದೆಹಲಿ ಮೂಲದ ಹೆರಿಟೇಜ್‌ ಏವಿಯೇಷನ್‌ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್‌ ಬುಧವಾರ ಇಲ್ಲಿ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಓರ್ವ ಎಂಜಿನಿಯರ್‌ ಸಾವನ್ನಪ್ಪಿದ್ದಾರೆ. ಇಲ್ಲಿನ ಆಕ್ಸ್‌ಫರ್ಡ್‌ ಕೌಂಟಿ ಗಾಲ್ಫ್ ಕೋರ್ಸ್‌ನಿಂದ ಹೊರಟ ಕಾಪರ್ಟರ್‌ ಮುಂಬೈನ ಜುಹುಗೆ ತೆರಳಬೇಕಿತ್ತು. ಆದರೆ ಕಾಪ್ಟರ್‌ ಟೇಕಾಫ್‌ ಆದ ಕೆಲವೇ ಸಮಯದಲ್ಲಿ, ಬೆಂಕಿ ಕಾಣಿಸಿಕೊಂಡು ಪತನವಾಗಿದೆ. ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಸಂಸದ ಮತ್ತು ಎನ್‌ಸಿಪಿಯ ರಾಜ್ಯಾಧ್ಯಕ್ಷ ಸುನಿಲ್‌ ತಟ್ಕರೆ ಅವರು ಇದೇ ಕಾಪ್ಟರ್‌ನಲ್ಲಿ ಮುಂಬೈನಿಂದ ರಾಯಗಢಕ್ಕೆ ಪ್ರಯಾಣಿಸಬೇಕಿತ್ತು.

==

ಗನ್‌ ಸಿಡಿದು ಗುಂಡು ಹಾರಿದ ಬಗ್ಗೆ ನಟ ಗೋವಿಂದ ನೀಡಿದ ಹೇಳಿಕೆಗೆ ಪೊಲೀಸರು ಅತೃಪ್ತಿ

ಮುಂಬೈ: ರಿವಾಲ್ವರ್‌ನಿಂದ ಗುಂಡು ಹಾರಿ ಕಾಲಿಗೆ ಗಾಯ ಆದ ಘಟನೆ ಬಗ್ಗೆ ಮುಂಬೈ ಪೊಲೀಸರು ನಟ ಗೋವಿಂದ ಅವರನ್ನು ಬುಧವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ, ಗನ್‌ ಸ್ವಚ್ಚ ಮಾಡುವ ವೇಳೆಗಾಗಲೇ ಅನ್‌ಲಾಕ್‌ ಆಗಿದ್ದ ಕಾರಣ ಅದರಿಂದ ಆಕಸ್ಮಿಕ ಗುಂಡು ಹಾರಿದೆ ಎಂದು ಅವರು ಉತ್ತರಿಸಿದ್ದಾರೆ. ಈ ಉತ್ತರ ಪೊಲೀಸರಿಗೆ ಪೂರ್ಣ ತೃಪ್ತಿ ತಂದಿಲ್ಲ ಎನ್ನಲಾಗಿದೆ. ಆದರೆ ಇದರ ಹೊರತಾಗಿಯೂ ಪ್ರಕರಣದಲ್ಲಿ ಮೇಲ್ನೋಟಕ್ಕೆ ಯಾವುದೇ ದುಷ್ಕೃತ್ಯ ಇಲ್ಲ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಇನ್ನೊಮ್ಮೆ ಅವರ ಹೇಳಿಕೆ ದಾಖಲಿಸಿಕೊಳ್ಳಬಹುದು ಎನ್ನಲಾಗಿದೆ. ಈ ನಡುವೆ ಗೋವಿಂದ ಅವರನ್ನು ಗುರುವಾರ ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಲಾಗುವುದು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.