ಸಾರಾಂಶ
ಕೋಲ್ಕತಾ: ಪ. ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾ ಎಂಬ ಹಳ್ಳಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾದ ಓರ್ವ ಮಹಿಳೆ ಹಾಗೂ ಪುರುಷನೊಬ್ಬನ ಮೇಲೆ ಶಂಕಿತ ತೃಣಮೂಲ ಕಾಂಗ್ರೆಸ್ ಬೆಂಬಲಿಗನೊಬ್ಬ ನಿರ್ದಯವಾಗಿ ನಡುಬೀದಿಯಲ್ಲೇ ಬೆತ್ತದಿಂದ ಹೊಡೆದು ಹಲ್ಲೆ ನಡೆಸಿರುವುದು ವಿವಾದಕ್ಕೀಡಾಗಿದೆ.
ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆತ ಮಹಿಳೆ ಹಾಗೂ ಪುರುಷನಿಗೆ ಕೋಲಿನಿಂದ ಹೊಡೆದಿದ್ದನ್ನು ಕಾಣಬಹುದಾಗಿದೆ. ಆಗ ಅವಳು ನೋವಿನಿಂದ ಕಿರುಚುತ್ತಾಳೆ. ಒಂದು ಹಂತದಲ್ಲಿ ಆತ ಮಹಿಳೆಯ ಕೂದಲು ಜಗ್ಗಾಡಿ ಒದೆಯುತ್ತಾನೆ. ಆಗ ಸುತ್ತಲಿದ್ದ ಹತ್ತಾರು ಜನ ಈ ಘಟನೆಯನ್ನು ಮೂಕಪ್ರೇಕ್ಷಕರಂತೆ ನೋಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ. ತಡೆಯಲು ಹೋಗುವುದಿಲ್ಲ. ಶನಿವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆಕ್ರೋಶದ ಬಳಿಕ ಪೊಲೀಸರು ಈಗ ಎಫ್‌ಐಆರ್ ದಾಖಲಿಸಿದ್ದಾರೆ.
ಹಲ್ಲೆಕೋರ ಟಿಎಂಸಿ ಕಾರ್ಯಕರ್ತ- ವಿಪಕ್ಷ:
‘ಇದು ರಾಜ್ಯದಲ್ಲಿನ ಕುಸಿದುಹೋದ ಕಾನೂನು ಸುವ್ಯವಸ್ಥೆಯ ಸಂಕೇತ. ಹೊಡೆಯುವವನು ಆಡಳಿತಾರೂಢ ಟಿಎಂಸಿ ಬೆಂಬಲಿಗ ಜೆಸಿಬಿ ಅಲಿಯಾಸ್ ತಾಜೇಮುಲ್. ಈತ ಹಲವು ಕೊಲೆ ಕೇಸಿನ ಆರೋಪಿ ಕೂಡ. ಸ್ಥಳೀಯ ಟಿಎಂಸಿ ಶಾಸಕನ ಆಪ್ತ’ ಎಂದು ಸಿಪಿಎಂ ಹಾಗೂ ಬಿಜೆಪಿ ಆರೋಪಿಸಿವೆ. ಈತ ಸ್ಥಳೀಯವಾಗಿ ರಾಜಿ ಪಂಚಾಯ್ತಿಗೆ ಕುಖ್ಯಾತಿ ಪಡೆದ ವ್ಯಕ್ತಿ ಆಗಿದ್ದಾನೆ.
ಈ ನಡುವ ಟಿಎಂಸಿ ಶಾಸಕ ಹಮೀದ್ ಉರ್ ರೆಹಮಾನ್ ಪ್ರತಿಕ್ರಿಯಿಸಿ, ‘ಘಟನೆಗೂ ಟಿಎಂಸಿಗೂ ಸಂಬಂಧವಿಲ್ಲ. ಅದು ಸ್ಥಳೀಯ ವಿಷಯ’ ಎಂದಿದ್ದಾರೆ.