ಸಾರಾಂಶ
ನವದೆಹಲಿ: ದಿಲ್ಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿರುವ ಆಪ್ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜೀವನದಲ್ಲಿ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಅವರ ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿದಿದ್ದು, 8.5 ಕೇಜಿ ತೂಕ ಇಳಿಕೆ ಆಗಿದೆ ಎಂದು ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಶನಿವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್ ಅವರ ಆರೋಗ್ಯ ತೀರ ಹದಗೆಟ್ಟಿದ್ದು, ಅವರನ್ನು ಶೀಘ್ರವಾಗಿ ಜೈಲಿನಿಂದ ಕರೆತಂದು ವೈದ್ಯಕೀಯ ಸೇವೆಗೆ ಒಳಪಡಿಸಿಬೇಕಿದೆ. ಇಲ್ಲವಾದರೆ ಏನಾದರೂ ಅನಾಹುತವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಕೇಜ್ರಿವಾಲ್ ಅವರು ಮಾ.21 ರಂದು ಬಂಧನವಾದಾಗ ಅವರ ದೇಹದ ತೂಕ 70 ಕೇಜಿ ಇತ್ತು. ಅದು ಈಗ 61.5ಕ್ಕೆ ಇಳಿದಿದೆ. ಅವರ ದೇಹದ ತೂಕ ನಿರಂತರವಾಗಿ ಇಳಿಕೆ ಆಗುತ್ತಿದೆ. ಅವರನ್ನು ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಡಪಡಿಸದ ಕಾರಣ ತೂಕ ಕಡಿಮೆ ಆಗಲು ಕಾರಣ ಎಂನೆಂಬುದು ಗೊತ್ತಾಗಿತ್ತಿಲ್ಲ ಎಂದು ಹೇಳಿದರು.
ಇ.ಡಿ. ಕೇಸಲ್ಲಿ ಕೇಜ್ರಿವಾಲ್ ಅವರಿಗೆ ಶುಕ್ರವಾರ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಇದೇ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಕೇಜ್ರಿವಾಲ್ ಅವರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ.