ಪ್ರಮುಖ ಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ

| Published : Jun 11 2024, 01:37 AM IST / Updated: Jun 11 2024, 08:18 AM IST

ಪ್ರಮುಖ ಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಸಂಪುಟ ರಚನೆ ಆಗಿದ್ದು, ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ.

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಸಂಪುಟ ರಚನೆ ಆಗಿದ್ದು, ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಲು ಬಿಜೆಪಿ ಯಶಸ್ವಿಯಾಗಿದೆ.

ಗೃಹ, ರಕ್ಷಣೆ, ವಿದೇಶಾಂಗ, ಶಿಕ್ಷಣ, ಸಂಸ್ಕೃತಿ ಹಾಗೂ ಹಣಕಾಸು ಖಾತೆಗಳನ್ನು ತನ್ನ ಮಿತ್ರ ಪಕ್ಷಗಳಾದ ಜೆಡಿಯುಗಾಗಲಿ, ಟಿಡಿಪಿಗಾಗಲಿ ಅಥವಾ ಇತರರಿಗಾಗಲಿ ಬಿಟ್ಟುಕೊಟ್ಟಿಲ್ಲ. ಏಕೆಂದರೆ ಇವು ಅತ್ಯಂತ ಸೂಕ್ಷ್ಮವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಈ ಸಚಿವಾಲಯಗಳ ಹೊಣೆ ಹೊತ್ತ ಅನುಭವಿ ಬಿಜೆಪಿ ಮಂತ್ರಿಗಳು ಈ ಖಾತೆಗಳ ಮೇಲೆ ನೇರ ನಿಗಾ ಇಡಲಿದ್ದಾರೆ.

ಗೃಹ ಖಾತೆಯು ಪೊಲೀಸ್‌ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಅದು ತಮ್ಮ ನಿಗಾದಲ್ಲೇ ಇರಬೇಕು ಎಂಬುದು ಮೋದಿ ಅವರ ಇರಾದೆ. ಹೀಗಾಗಿ ಅದನ್ನು ಮಿತ್ರರಿಗೆ ಬಿಟ್ಟುಕೊಟ್ಟಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಅಮಿತ್‌ ಶಾ ಇದೇ ಖಾತೆಯಲ್ಲಿ ಮುಂದುವರೆಯಲಿದ್ದಾರೆ.

ರಕ್ಷಣಾ ಸಚಿವ ಖಾತೆಯು ದೇಶದ ಗಡಿ ರಕ್ಷಣೆಯಲ್ಲಿ ಮಹತ್ವದ್ದು. ಚೀನಾ ಹಾಗೂ ಪಾಕಿಸ್ತಾನ ಗಡಿಯ ಆಚೆ ನಿಂತು ಸತತ ಕಿರಿಕ್‌ ನೀಡುತ್ತಲೇ ಇರುತ್ತವೆ. ಹೀಗಾಗಿ ಇಂಥ ಪ್ರಮುಖ ಖಾತೆಯನ್ನು ಅಷ್ಟಾಗಿ ಗುರುತು ಪರಿಚಯ ಇಲ್ಲದ ಅನ್ಯ ಪಕ್ಷದವರಿಗೆ ನೀಡುವ ಮನಸ್ಸು ಮೋದಿಗೆ ಇಲ್ಲ. ಹೀಗಾಗಿ ರಾಜನಾಥ ಸಿಂಗ್‌ ಅವರನ್ನೇ ರಕ್ಷಣಾ ಮಂತ್ರಿಯಾಗಿ ಮುಂದುವರೆಸಲಾಗಿದೆ.

ಹಣಕಾಸು ಖಾತೆ ಸಾಂಪ್ರದಾಯಿಕವಾಗಿ ಪ್ರಧಾನಿ ಯಾರು ಇರುತ್ತಾರೋ ಅವರು ತಮ್ಮ ಆಪ್ತರಿಗೇ ನೀಡುವುದು ಹಿಂದಿನಿಂದಲೂ ಬಂದ ಪದ್ಧತಿ. ಏಕೆಂದರೆ ದೇಶದ ಹಣಕಾಸು ವ್ಯವಹಾರಗಳು ದೈನಂದಿನ ಜನರ ಜೀವನದ ಮೇಲೆ ಪರಿಣಾಮ ಬೀರುವಂಥವು. ಹೀಗಾಗಿ ಮೋದಿ ಅವರು ತಮ್ಮದೇ ಪಕ್ಷದ ಆಪ್ತರಿಗೆ ಈ ಖಾತೆ ನೀಡಿದ್ದಾರೆ. ಕಳೆದ ಸಲದಂತೆ ಈ ಬಾರಿಯೂ ನಿರ್ಮಲಾ ಸೀತಾರಾಮನ್‌ ಮುಂದುವರೆದಿದ್ದಾರೆ.

ವಿದೇಶಾಂಗ ಖಾತೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮಹತ್ವದ್ದು. ದೇಶ-ದೇಶಗಳ ನಡುವೆ ವ್ಯವಹರಿಸಬೇಕಾಗುತ್ತದೆ. ವಿಶ್ವಸಂಸ್ತೆ ಜತೆಗೂ ಸಮನ್ವಯ ಸಾಧಿಸಬೇಕಾಗುತ್ತದೆ. ವಿಶ್ವ ವಲಯದಲ್ಲಿ ಭಾರತ ಹೆಸರು ಮಾಡಬೇಕು ಎಂದರೆ ಗಟ್ಟಿ ಸ್ವರದ ವಿದೇಶಾಂಗ ಸಚಿವ ಇರಬೇಕು. ಹೀಗಾಗಿ ಬಿಜೆಪಿ ಈ ಖಾತೆಯನ್ನು ತನ್ನ ಬಳಿಯೇ ಇಟ್ಟುಕೊಂಡಿದೆ. ಎಸ್‌. ಜೈಶಂಕರ್‌ ಅವರನ್ನೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ.

ಅದೇ ರೀತಿ ಶಿಕ್ಷಣ ಸಚಿವರಾಗಿ ಧಮೇಂಧ್ರ ಪ್ರಧಾನ್‌ ಮುಂದುವರೆಸಿದ್ದರೆ, ಸಂಸ್ಕೃತಿ ಖಾತೆಯನ್ನು ಇದೇ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ತಮ್ಮದೇ ಪಕ್ಷದ ಸುರೇಶ್‌ ಗೋಪಿ ಅವರಿಗೆ ಬಿಜೆಪಿ ನೀಡಿದೆ.

==

ಕೇಳಿದ ಹುದ್ದೆ ನೀಡದೇ ಮಿತ್ರರಿಗೆ ‘ಸಮಾಧಾನಕರ’ ಹುದ್ದೆ

ನವದೆಹಲಿ: ಮಹತ್ವದ ರಕ್ಷಣೆ, ವಿದೇಶಾಂಗ, ಗೃಹ, ವಿತ್ತ, ರೈಲ್ವೆ, ಕೃಷಿ, ಹೆದ್ದಾರಿಯಂಥ ಖಾತೆಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶ ಕಂಡಿದೆ. ಆದರೆ ಈ ಮಹತ್ವದ ಹುದ್ದೆಗಳ ಪೈಕಿ ಕೆಲವು ಖಾತೆಗಳಿಗೆ ಬೇಡಿಕೆ ಇಟ್ಟಿದ್ದ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಹಾಗೂ ಎಲ್‌ಜೆಪಿಗಳಿಗೆ ಸಮಾಧಾನಕರ ಖಾತೆಗಳನ್ನು ನೀಡಲಾಗಿದೆ.ಟಿಡಿಪಿ ಹಾಗೂ ಜೆಡಿಯು ಪ್ರಮುಖ ಕೃಷಿ ಹಾಗೂ ಹೆದ್ದಾರಿ ಖಾತೆಗೆ ಪಟ್ಟು ಹಿಡಿದಿದ್ದವು. ಎಲ್‌ಜೆಪಿ ರೈಲ್ವೆ ಖಾತೆಗೆ ಬೇಡಿಕೆ ಇಟ್ಟಿತ್ತು. ಆದರೆ ಜೆಡಿಯುನ ಲಲನ್‌ ಸಿಂಗ್‌ಗೆ ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಖಾತೆ ನೀಡಲಾಗಿದೆ. ಟಿಡಿಪಿಯ ಕೆ. ರಾಮಮೋಹನ್ ನಾಯ್ಡು ಅವರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯವನ್ನು ಹಂಚಿಕೆ ಮಾಡಲಾಗಿದೆ.ಈ ಹಿಂದೆ ನಾಯ್ಡು ಅವರ ಟಿಡಿಪಿ ಪಕ್ಷದ ಅಶೋಕ್ ಗಜಪತಿರಾಜು ಎನ್‌ಡಿಎ ಸರ್ಕಾರದಲ್ಲಿ ವಿಮಾನಯಾನ ಸಚಿವರಾಗಿದ್ದರು. ಅಂತೆಯೇ ಚಿರಾಗ್‌ ಅವರ ತಂದೆ ರಾಮವಿಲಾಸ್‌ ಪಾಸ್ವಾನ್‌ ಅವರು ಆಹಾರ ಸಂಸ್ಕರಣಾ ಖಾತೆ ಹೊಂದಿದ್ದರು ಎಂಬುದು ಗಮನಾರ್ಹ