ಅಯೋಧ್ಯೆ ರಾಮ ಮಂದಿರಕ್ಕೆ 1989ರಲ್ಲಿ ಮೊದಲ ಇಟ್ಟಿಗೆ ಇಟ್ಟ ವಿಎಚ್ಪಿ ನಾಯಕ ಚೌಪಾಲ್‌ ನಿಧನ

| N/A | Published : Feb 08 2025, 12:35 AM IST / Updated: Feb 08 2025, 06:52 AM IST

ಸಾರಾಂಶ

1989ರಲ್ಲಿ ಅಯೋಧ್ಯೆಯಲ್ಲಿ ಪ್ರಸಿದ್ಧ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ವಿಶ್ವ ಹಿಂದೂ ಪರಿಷತ್‌ ನಾಯಕ ಕಾಮೇಶ್ವರ್‌ ಚೌಪಾಲ್‌ (68) ಶುಕ್ರವಾರ ಇಲ್ಲಿ ನಿಧನರಾದರು.

ಅಯೋಧ್ಯೆ: 1989ರಲ್ಲಿ ಅಯೋಧ್ಯೆಯಲ್ಲಿ ಪ್ರಸಿದ್ಧ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ವಿಶ್ವ ಹಿಂದೂ ಪರಿಷತ್‌ ನಾಯಕ ಕಾಮೇಶ್ವರ್‌ ಚೌಪಾಲ್‌ (68) ಶುಕ್ರವಾರ ಇಲ್ಲಿ ನಿಧನರಾದರು.

ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಚೌಪಾಲ್‌ ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್‌ ಆಸ್ಪತ್ರೆಗೆ ದಾಖಲಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಅವರು ಕೊನೆಯುಸಿರೆಳೆದಿದ್ದಾರೆ.1989ರಲ್ಲಿ ರಾಮಮಂದಿರ ನಿರ್ಮಾಣದ ಉದ್ದೇಶದಿಂದ ಆರಂಭಿಸಿದ್ದ ಕಾಮಗಾರಿಗೆ ಮೊದಲ ಇಟ್ಟಿಗೆಯನ್ನು ಚೌಪಾಲ್‌ ಇಟ್ಟಿದ್ದರು. ಹೀಗಾಗಿ ಅವರನ್ನು ಮೊದಲ ಕರಸೇವಕ ಎಂದು ಆರ್‌ಎಸ್‌ಎಸ್‌ ಗೌರವಿಸಿತ್ತು.ಚೌಪಾಲ್‌ ಅಗಲಿಕೆಗೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಭು ರಾಮನ ಅನನ್ಯ ಭಕ್ತರಾಗಿದ್ದ ಚೌಪಾಲ್‌ ಅವರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ದಲಿತ ಹಿನ್ನೆಲೆಯಿಂದ ಬಂದ ಅವರು ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸಿದ್ದನ್ನು ಸದಾ ಸ್ಮರಿಸಲಾಗುವುದು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸಿಎಂ ಯೋಗಿ ಕೂಡ, ‘ತಮ್ಮ ಸಂಪೂರ್ಣ ಜೀವನವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗಾಗಿ ಚೌಪಾಲ್‌ ಮುಡುಪಾಗಿಟ್ಟಿದ್ದರು’ ಎಂದು ಸಂತಾಪ ಸೂಚಿಸಿದ್ದಾರೆ.