ಸಾರಾಂಶ
ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹದ ಪದ ಬಳಸಿದ ಬಿಜೆಪಿ ನಾಯಕರಿಗೆ ಶಿಸ್ತಿನಿಂದ ಇರಲು ಹೇಳಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ಬಿಜೆಪಿ ತಿರುಗೇಟು ನೀಡಿದ್ದು, ಮೋದಿ ಅವರನ್ನು ಕಾಂಗ್ರೆಸ್ ನಾಯಕರು ಟೀಕಿಸಲು ಬಳಸಿದ ಪದಗಳ ಪಟ್ಟಿ ಬಿಡುಗಡೆ ಮಾಡಿದೆ.
ಇದಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ್ ಖರ್ಗೆಗೆ ಪತ್ರ ಬರೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ‘ಮೋದಿಯವರಿಗೆ ಸಾವಿನ ವ್ಯಾಪಾರಿ ಎಂದು ಬಳಸಿದ್ದು ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಅಲ್ಲವೇ? ನೀವು, ನಿಮ್ಮ ಪಕ್ಷ ನಾಚಿಕೆಯಿಲ್ಲದೆ ಇಂತಹ ಹೇಳಿಕೆಗಳನ್ನು ವೈಭವೀಕರಿಸಿದ್ದೀರಿ. ಆಗ ಕಾಂಗ್ರೆಸ್ ರಾಜಕೀಯ ಸೌಹಾರ್ದತೆಯನ್ನು ಮರೆತು ಬಿಟ್ಟಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ಮೋದಿಯನ್ನು, ‘ ಹಾವು, ಚೇಳು, ರಾಕ್ಷಸ, ಕಳ್ಳ, ಹೇಡಿ’ ಎಂದು ಕರೆದಿದ್ದಾರೆ ಎಂದು ನಡ್ಡಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಾಲಿಷ ಹೇಳಿಕೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಇದು ಬಿಜೆಪಿ ಅವರ ದುರಹಂಕಾರದ ಪರಮಾವಧಿ, ರಾಹುಲ್ ಗಾಂಧಿ ಅವರ ಬಗ್ಗೆ ಪ್ರಧಾನಿ ಆಡಿದ ದೋಷಪೂರಿತ ಮಾತಿಗೆ ಬಿಜೆಪಿ ಬೆಂಬಲ ಇದೆ ಎಂದು ಇದು ಸಾಬೀತುಪಡಿಸುತ್ತದೆ. ಈ ಪ್ರತಿಕ್ರಿಯೆ ಬಾಲಿಷವಾಗಿದೆ. ರಾಜಕೀಯದ ಮತ್ತೊಂದು ತಳಮಟ್ಟವನ್ನು ಬಿಜೆಪಿ ಮುಟ್ಟಿದೆ ಎಂದು ಕಿಡಿಕಾರಿದರು.