ಸಾರಾಂಶ
ಭುವನೇಶ್ವರ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ರಾಜಕೀಯ ಜಟಾಪಟಿ ಮುಂದುವರೆದಿದ್ದು, ‘ ಬಿಜೆಪಿ ಮಹಾರಾಷ್ಟ್ರದಲ್ಲಿ ನಡೆಸಿದಂತೆ ಬಿಹಾರದಲ್ಲಿಯೂ ಚುನಾವಣೆ ಹೈಜಾಕ್ ಮಾಡಲು ಯತ್ನಿಸುತ್ತಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಒಡಿಶಾದಲ್ಲಿ ನಡೆದ ಸಂವಿಧಾನ ಬಚಾವೋ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ‘ಮಹಾರಾಷ್ಟ್ರದಂತೆ ಬಿಹಾರದಲ್ಲಿಯೂ ಚುನಾವಣೆ ಹೈಜಾಕ್ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ದೇಶಾದ್ಯಂತ ಬಿಜೆಪಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ’ ಎಂದರು,
ಚುನಾವಣಾ ಆಯೋಗದ ವಿರುದ್ಧವೂ ಕಿಡಿಕಾರಿರುವ ಅವರು, ‘ ಚುನಾವಣಾ ಆಯೋಗ ತನ್ನ ಕೆಲಸ ಮಾಡುತ್ತಿಲ್ಲ. ಆದರೆ ಬಿಜೆಪಿ ಪರ ಕೆಲಸ ಮಾಡುವುದರಲ್ಲಿ ಆಸಕ್ತಿ ತೋರಿಸುತ್ತಿದೆ’ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ಕಿಡಿ : ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದು,‘ ಬಿಜೆಪಿ ಸಂವಿಧಾನದಿಂದ ಜಾತ್ಯತೀತತೆ ಮತ್ತು ಸಮಾಜವಾದವನ್ನು ಕೈಬಿಡಲು ಪ್ರಯತ್ನಿಸುತ್ತಿದೆ‘ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಅವರು ದಲಿತರು, ಬುಡಕಟ್ಟು ಜನಾಂಗದವರು ತಮ್ಮ ಹಕ್ಕುಗಳಿಗೆ ಹೋರಾಡಲು ಕಲಿಯದಿದ್ದರೆ ಬಿಜೆಪಿ ಅವರನ್ನು ನಾಶಪಡಿಸುತ್ತದೆ ಎಂದು ಖರ್ಗೆ ಹೇಳಿದರು.