ಆ.17ಕ್ಕೆ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ

| Published : Aug 14 2024, 12:45 AM IST

ಸಾರಾಂಶ

ಕೇಂದ್ರದಲ್ಲಿ ಸತತ 3ನೇ ಬಾರಿ ಸರ್ಕಾರ ರಚನೆಯಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಇದೀಗ ಪಕ್ಷ ಸಂಘಟನೆಯತ್ತ ಚಿತ್ತ ಹರಿಸಿದೆ. ಪಕ್ಷಕ್ಕೆ ಹೊಸ ಸದಸ್ಯತ್ವ ನೋಂದಣಿ ಮತ್ತು ನೂತನ ಅಧ್ಯಕ್ಷರ/ಕಾರ್ಯಾಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡುವ ಸಲುವಾಗಿ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಆ.17ಕ್ಕೆ ಸಭೆ ಸೇರಲಿದ್ದಾರೆ.

ನವದೆಹಲಿ: ಕೇಂದ್ರದಲ್ಲಿ ಸತತ 3ನೇ ಬಾರಿ ಸರ್ಕಾರ ರಚನೆಯಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಇದೀಗ ಪಕ್ಷ ಸಂಘಟನೆಯತ್ತ ಚಿತ್ತ ಹರಿಸಿದೆ. ಪಕ್ಷಕ್ಕೆ ಹೊಸ ಸದಸ್ಯತ್ವ ನೋಂದಣಿ ಮತ್ತು ನೂತನ ಅಧ್ಯಕ್ಷರ/ಕಾರ್ಯಾಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡುವ ಸಲುವಾಗಿ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಆ.17ಕ್ಕೆ ಸಭೆ ಸೇರಲಿದ್ದಾರೆ.

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ತಂಡದ ಸದಸ್ಯರ ಜೊತೆಗೆ, ಎಲ್ಲಾ ರಾಜ್ಯಗಳ ರಾಜ್ಯ ಘಟಕದ ಅಧ್ಯಕ್ಷರು, ಪಕ್ಷದ ರಾಜ್ಯ ಉಸ್ತುವಾರಿಗಳು ಹಾಜರಿರಲಿದ್ದಾರೆ.

ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಅವಧಿ ಮುಗಿದು ಅವರು ಈಗಾಗಲೇ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಹೀಗಾಗಿ ಹೊಸ ಅಧ್ಯಕ್ಷ ರ ಆಯ್ಕೆ ಆಗಬೇಕಿದೆ. ಆದರೆ ಅದಕ್ಕೂ ಮೊದಲು ದೇಶವ್ಯಾಪಿ ನೂತನ ಸದಸ್ಯತ್ವ ಅಭಿಯಾನ ನಡೆಸಲು ಪಕ್ಷ ನಿರ್ಧರಿಸಿದೆ. ಈ ಹೊಣೆ ಹೊರಲು ಸದ್ಯಕ್ಕೆ ಕಾರ್ಯಾಧ್ಯಕ್ಷರ ಆಯ್ಕೆ ಮಾಡಿ ಬಳಿಕ ಅವರ ನೇತೃತ್ವದಲ್ಲೇ ಸದಸ್ಯತ್ವ ಅಭಿಯಾನ ಮತ್ತು ನೂತನ ಅಧ್ಯಕ್ಷರ ಆಯ್ಕೆ ನಡೆಸುವ ಸಾಧ್ಯತೆ ಇದೆ.

ವರ್ಷಾಂತ್ಯಕ್ಕೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ಅದಕ್ಕೂ ಮೊದಲೇ ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸುವ ಇರಾದೆಯನ್ನು ಬಿಜೆಪಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.