ರಾಜ್ಯಸಭೆಯಲ್ಲಿ ಬಿಜೆಪಿ, ಎನ್‌ಡಿಎ ಬಲ ಇನ್ನಷ್ಟು ಕುಸಿತ

| Published : Jul 16 2024, 12:31 AM IST / Updated: Jul 16 2024, 05:18 AM IST

ರಾಜ್ಯಸಭೆಯಲ್ಲಿ ಬಿಜೆಪಿ, ಎನ್‌ಡಿಎ ಬಲ ಇನ್ನಷ್ಟು ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯ ಜೊತೆ ಗುರುತಿಸಿಕೊಂಡಿದ್ದ ನಾಲ್ವರು ಸದಸ್ಯರ ಅವಧಿ ಮುಕ್ತಾಯಗೊಳ್ಳುವುದರೊಂದಿಗೆ ಹಿರಿಯರ ಮನೆ ರಾಜ್ಯಸಭೆಯಲ್ಲಿ ಕಮಲ ಪಕ್ಷದ ಬಲ ಇನ್ನಷ್ಟು ಕ್ಷೀಣಿಸಿದೆ. ಹೀಗಾಗಿ ಸಹಜವಾಗಿಯೇ ಎನ್‌ಡಿಎ ಬಲ ಕೂಡ ಇಳಿಕೆಯಾಗಿದೆ.

ನವದೆಹಲಿ: ಬಿಜೆಪಿಯ ಜೊತೆ ಗುರುತಿಸಿಕೊಂಡಿದ್ದ ನಾಲ್ವರು ಸದಸ್ಯರ ಅವಧಿ ಮುಕ್ತಾಯಗೊಳ್ಳುವುದರೊಂದಿಗೆ ಹಿರಿಯರ ಮನೆ ರಾಜ್ಯಸಭೆಯಲ್ಲಿ ಕಮಲ ಪಕ್ಷದ ಬಲ ಇನ್ನಷ್ಟು ಕ್ಷೀಣಿಸಿದೆ. ಹೀಗಾಗಿ ಸಹಜವಾಗಿಯೇ ಎನ್‌ಡಿಎ ಬಲ ಕೂಡ ಇಳಿಕೆಯಾಗಿದೆ.

ರಾಕೇಶ್‌ ಸಿನ್ಹಾ, ರಾಮ್‌ ಶಕಲ್‌, ಸೋನಲ್‌ ಮಾನ್‌ಸಿಂಗ್‌ ಹಾಗೂ ಮಹೇಶ್‌ ಜೇಠ್ಮಲಾನಿ ಅವಧಿ ಶನಿವಾರ ಕೊನೆಯಾಗಿದೆ. ಇವರು ಬಿಜೆಪಿಯಿಂದ ನಾಮನಿರ್ದೇಶನಗೊಂಡ ಹಾಗೂ ಬಿಜೆಪಿ ಜೊತೆಗೇ ಗುರುತಿಸಿಕೊಂಡ ಸದಸ್ಯರಾಗಿದ್ದರು. ಇವರ ನಿವೃತ್ತಿಯಿಂದಾಗಿ ರಾಜ್ಯಸಭೆಯಲ್ಲಿ ಬಿಜೆಪಿ ಬಲ 86ಕ್ಕೆ ಹಾಗೂ ಎನ್‌ಡಿಎ ಬಲ 101ಕ್ಕೆ ಕುಸಿತಗೊಂಡಿದೆ. ರಾಜ್ಯಸಭೆಯ ಒಟ್ಟು ಬಲ 245 ಆಗಿದ್ದು, ಸದ್ಯ ಒಟ್ಟು ಸದಸ್ಯರ ಸಂಖ್ಯೆ 225 ಇರುವುದರಿಂದ ಬಹುಮತಕ್ಕೆ 113 ಸದಸ್ಯರು ಬೇಕು.

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟ ರಾಜ್ಯಸಭೆಯಲ್ಲಿ 87 ಸದಸ್ಯರನ್ನು ಹೊಂದಿದೆ. ಅದರಲ್ಲಿ ಕಾಂಗ್ರೆಸ್‌ 26, ಟಿಎಂಸಿ 13 ಹಾಗೂ ಆಪ್‌ ಮತ್ತು ಡಿಎಂಕೆ ತಲಾ 10 ಸ್ಥಾನಗಳನ್ನು ಹೊಂದಿವೆ. ಇನ್ನುಳಿದ ಸ್ಥಾನಗಳನ್ನು ಬಿಜೆಪಿ ಅಥವಾ ಕಾಂಗ್ರೆಸ್‌ ಜೊತೆಗೆ ಗುರುತಿಸಿಕೊಳ್ಳದ ಪಕ್ಷಗಳು ಹೊಂದಿವೆ.

ಹೀಗಾಗಿ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಯನ್ನು ಪಾಸು ಮಾಡಿಕೊಳ್ಳಲು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು 12 ಬಾಹ್ಯ ಮತಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.

ಉಪಚುನಾವಣೆ ಬಳಿಕ ಬಲ ಹೆಚ್ಚಳ:

ಈಗ ರಾಜ್ಯಸಭೆ ಸದಸ್ಯರಾಗಿದ್ದ ಸುಮಾರು 10 ಜನ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಸ್ಥಾನ ತೆರವಾಗಿದ್ದು, ಶೀಘ್ರ ಉಪಚುನಾವಣೆ ನಡೆಯಲಿವೆ. ಆಗ ಬಿಜೆಪಿ ಬಲ ಕೊಂಚ ಹೆಚ್ಚಬಹುದಾಗಿದೆ. ಇನ್ನು ಹೊಸ ನಾಮನಿರ್ದೇಶಿತ ಸದಸ್ಯರು ನೇಮಕವಾದರೆ ಅವರು ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಹೆಚ್ಚು.