ದಿಲ್ಲಿ ಬಿಜೆಪಿ ಮತ್ತಷ್ಟು ಉಚಿತ ಬಂಪರ್‌

| Published : Jan 22 2025, 12:33 AM IST

ಸಾರಾಂಶ

ದೆಹಲಿ ಗದ್ದುಗೆಯೇರಲು ಪಣ ತೊಟ್ಟಿರುವ ಬಿಜೆಪಿ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರದ 2ನೇ ಹಂತ ಬಿಡುಗಡೆ ಮಾಡಿದೆ. ಇದರಲ್ಲಿಯೂ ಉಚಿತ ಶಿಕ್ಷಣ , ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಜೀವ ವಿಮೆ ಸೇರಿದಂತೆ ಹಲವು ಉಚಿತ ಭರವಸೆಗಳನ್ನು ನೀಡಿದೆ.

ಪಿಟಿಐ ನವದೆಹಲಿ

ದೆಹಲಿ ಗದ್ದುಗೆಯೇರಲು ಪಣ ತೊಟ್ಟಿರುವ ಬಿಜೆಪಿ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರದ 2ನೇ ಹಂತ ಬಿಡುಗಡೆ ಮಾಡಿದೆ. ಇದರಲ್ಲಿಯೂ ಉಚಿತ ಶಿಕ್ಷಣ , ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಜೀವ ವಿಮೆ ಸೇರಿದಂತೆ ಹಲವು ಉಚಿತ ಭರವಸೆಗಳನ್ನು ನೀಡಿದೆ.

ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್‌ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಇದರಲ್ಲಿ ಹಲವು ಉಚಿತ ಭರವಸೆಗಳನ್ನು ಮತದಾರರಿಗೆ ನೀಡಲಾಗಿದೆ.

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿ ತನಕ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ 2 ಪ್ರಯತ್ನಗಳಿಗೆ 15 ಸಾವಿರ ರು., ಭೀಮರಾವ್ ಅಂಬೇಡ್ಕರ್ ಸ್ಟೈಫಂಡ್ ಯೋಜನೆಯಡಿ ಐಟಿಐ ಮತ್ತು ಪಾಲಿಟೆಕ್ನಿಕ್ ಕೌಶಲ್ಯ ಕೇಂದ್ರಗಳಲ್ಲಿ ತಾಂತ್ರಿಕ ಕೋರ್ಸ್‌ಗಳನ್ನು ಓದುತ್ತಿರುವ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1 ಸಾವಿರ ರು. ಆರ್ಥಿಕ ನೆರವು, ಆಟೋ ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಿ ಚಾಲಕರಿಗೆ 10 ಲಕ್ಷ ರು. ಜೀವ ವಿಮೆ ಮತ್ತು 5 ಲಕ್ಷ ರು. ಅಪಘಾತ ವಿಮೆ ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಠಾಕೂರ್‌ ಅವರು ‘ಬಿಜೆಪಿ ಅಧಿಕಾರಕ್ಕೆ ಬಂದರೆ ಎಸ್‌ಐಟಿ ಸ್ಥಾಪಿಸಿ ಆಪ್ ಹಗರಣಗಳ ತನಿಖೆ ಮಾಡುತ್ತೇವೆ’ ಎಂದು ಹೇಳಿದರು. ಬಿಜೆಪಿ ಭರವಸೆಗಳು ದೇಶಕ್ಕೆ ಅಪಾಯಕಾರಿ:ಬಿಜೆಪಿ ಸಂಕಲ್ಪ ಪತ್ರದಲ್ಲಿ ನೀಡಿರುವ ಭರವಸೆಗಳು ದೇಶಕ್ಕೆ ಅಪಾಯಕಾರಿ ಎಂದು ಆಪ್‌ ನಾಯಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ಸ್ಥಗಿತಗೊಳಿಸಲು ಮತ್ತು ಮೊಹಲ್ಲಾ ಕ್ಲಿನಿಕ್ ಸೇರಿದಂತೆ ಉಚಿತ ಆರೋಗ್ಯ ಸೇವೆಗಳನ್ನು ತೆಗೆದುಹಾಕಲು ಯೋಜಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಬಡವರು ಬದುಕುವುದೇ ಕಷ್ಟವಾಗುತ್ತದೆ. ಇದು ಜನ ಸಾಮಾನ್ಯರ ಮೇಲಿನ ದಾಳಿ’ ಎಂದಿದ್ದಾರೆ.