ಸಾರಾಂಶ
ಭಾರತದ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಮೆರಿಕ ಇರಿಸಿದ್ದ ನಿಧಿಯನ್ನು ಆ ದೇಶದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಲಾನ್ ಮಸ್ಕ್ ಅಧ್ಯಕ್ಷತೆಯ ‘ಅಮೆರಿಕ ಕ್ಷಮತಾ ಇಲಾಖೆ (ಡಾಜ್) ರದ್ದು ಮಾಡಿದೆ.
ವಾಷಿಂಗ್ಟನ್: ಭಾರತದ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು (ಪರೋಕ್ಷವಾಗಿ ಮತದಾರರ ಮೇಲೆ ಪ್ರಭಾವ ಬೀರಲು) ಅಮೆರಿಕ ಇರಿಸಿದ್ದ 21 ದಶಲಕ್ಷ ಡಾಲರ್ (180 ಕೋಟಿ ರು.) ನಿಧಿಯನ್ನು ಆ ದೇಶದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಲಾನ್ ಮಸ್ಕ್ ಅಧ್ಯಕ್ಷತೆಯ ‘ಅಮೆರಿಕ ಕ್ಷಮತಾ ಇಲಾಖೆ (ಡಾಜ್) ರದ್ದು ಮಾಡಿದೆ.ಇದರ ನಡುವೆಯೇ, ಹಿಂದೂಗಳ ಮೇಲೆ ದಾಳಿ ಮಾಡಿ ಕುಖ್ಯಾತಿ ಪಡೆದಿರುವ ಬಾಂಗ್ಲಾದೇಶ ರಾಜಕೀಯ ಸುಧಾರಣೆಗೆ ಅಮೆರಿಕ ಇರಿಸಿದ್ದ 29 ದಶಲಕ್ಷ ಡಾಲರ್ ನಿಧಿಯನ್ನೂ ಮಸ್ಕ್ ರದ್ದು ಮಾಡಿದ್ದಾರೆ.
ಅಮೆರಿಕದ ತೆರಿಗೆದಾರರ ಹಣ ಅಮೆರಿಕದ ಅಭಿವೃದ್ಧಿಗೆ ಬಳಕೆ ಆಗಬೇಕೇ ವಿನಾ, ನಿರರ್ಥಕ ವಿದೇಶಿ ವಿಷಯಗಳಿಗೆ ಅಲ್ಲ ಎಂಬ ಕಾರಣ ನೀಡಿ ಅವರು ಈ ನಿಧಿ ರದ್ದು ಮಾಡಿದ್ದಾರೆ. ಇದಲ್ಲದೆ ಅನೇಕ ವಿದೇಶಗಳ ನಿಧಿಯನ್ನೂ ರದ್ದುಗೊಳಿಸಲಾಗಿದೆ. ಇದು ಟ್ರಂಪ್ ಆಡಳಿತದ ಮಿತವ್ಯಯ ಮಂತ್ರ ಪಠಣದ ಭಾಗವಾಗಿದೆ.ಅಲ್ಲದೆ, ಅಮೆರಿಕಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಟ್ರಂಪ್ ಹಾಗೂ ಮಸ್ಕ್ ಜತೆ ಸಭೆ ನಡೆಸಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದ್ದು ಗಮನಾರ್ಹ.
ಕಾಂಗ್ರೆಸ್ ಮೇಲೆ ಬಿಜೆಪಿ ಕಿಡಿ:ಮಸ್ಕ್ ಆದೇಶವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಚಾಟಿ ಬೀಸಿದೆ.
‘ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಹಾಗೂ ಸಾರ್ವಭೌಮತೆ ವಿಚಾರದಲ್ಲಿ ಅನ್ಯ ದೇಶಗಳ ಹಸ್ತಕ್ಷೇಪ ಸಲ್ಲದು. ಆದರೆ ಹಿಂದಿನ ಯುಪಿಎ ಸರ್ಕಾರವು ಭಾರತ ವಿರೋಧಿ ಜಾರ್ಜ್ ಸೊರೋಸ್ ಜತೆಗೂಡಿ ಭಾರತದ ಆಂತರಿಕ ವಿಷಯದಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿತ್ತು. ಅದರ ಫಲವೇ ಅಮೆರಿಕವು ಭಾರತದಲ್ಲಿ ಮತದಾನ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಇರಿಸಿದ್ದ 21 ದಶಲಕ್ಷ ಡಾಲರ್ ಹಣ. ಈಗ ಇದರ ರದ್ದತಿ ಸ್ವಾಗತಾರ್ಹ’ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಹೇಳಿದ್ದಾರೆ.ಇದೇ ವೇಳೆ, ’2012ರಲ್ಲಿ ಯುಪಿಎ ಸರ್ಕಾರ ಇದ್ದಾಗ ಎಸ್.ವೈ. ಖುರೇಷಿ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದರು. ಆಗ ಸೊರೋಸ್ ಜತೆ ನಂಟು ಹೊಂದಿದ್ದ ಸಂಸ್ಥೆ ಜತೆ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯೋಗ ಒಪ್ಪಂದ ಮಾಡಿಕೊಂಡಿತ್ತು. ಇದು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಅಮೆರಿಕಕ್ಕೆಯುಪಿಎ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಿದರ್ಶನ’ ಎಂದಿದ್ದಾರೆ.