ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರಾ ಜಿಲ್ಲೆಯ ಶಸ್ತ್ರಾಸ್ತ್ರ ಕಾರ್ಖಾನೆ ಸ್ಫೋಟಕ್ಕೆ 8 ಬಲಿ

| N/A | Published : Jan 25 2025, 01:00 AM IST / Updated: Jan 25 2025, 09:19 AM IST

ಸಾರಾಂಶ

ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರಾ ಜಿಲ್ಲೆಯ ಜವಾಹರನಗರ ಪ್ರದೇಶದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 8 ಜನ ಸಾವನ್ನಪ್ಪಿ, 7 ಮಂದಿ ಗಾಯಗೊಂಡ ಭೀಕರ ಘಟನೆ ನಡೆದಿದೆ.

 ಭಂಡಾರ (ಮಹಾರಾಷ್ಟ್ರ) : ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರಾ ಜಿಲ್ಲೆಯ ಜವಾಹರನಗರ ಪ್ರದೇಶದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 8 ಜನ ಸಾವನ್ನಪ್ಪಿ, 7 ಮಂದಿ ಗಾಯಗೊಂಡ ಭೀಕರ ಘಟನೆ ನಡೆದಿದೆ.

ಮೊದಲು ಸ್ಫೋಟ ಸಂಭವಿಸಿದೆ ಹಾಗೂ ನಂತರ ಘಟಕದ ಮೇಲ್ಛಾವಣಿ ಕುಸಿದಿದೆ. ಇದರಿಂದ ಸಾವು ನೋವು ಹೆಚ್ಚಿದೆ. ಘಟನಾ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಂಡಾರದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಆರಂಭಿಕ ವರದಿಯಂತೆ 8 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಆಘಾತ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು?:

‘ಕಾರ್ಖಾನೆಯ ಎಲ್‌ಟಿಪಿ ವಿಭಾಗದಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಘಟನೆ ವೇಳೆ ಕಾರ್ಖಾನೆಯಲ್ಲಿ 13ರಿಂದ 14 ಮಂದಿ ಕೆಲಸ ಮಾಡುತ್ತಿದ್ದರು. ಅಗ್ನಿಶಾಮಕ ದಳ ಬೆಂಕಿ ನಂದನ ಆರಂಭಿಸಿದಾಗ ಛಾವಣಿ ಕೂಡ ಕುಸಿಯಿತು. ಈ ವೇಳೆ 8 ಜನರನ್ನು ಹೊರತುಪಡಿಸಿ ಉಳಿದವರನ್ನು ರಕ್ಷಿಸಲಾಯಿತು’ ಎಂದು ಜಿಲ್ಲಾಧಿಕಾರಿ ಸಂಜಯ್ ಕೋಲ್ಟೆ ತಿಳಿಸಿದ್ದಾರೆ.