ಸಾರಾಂಶ
ನೆಲ, ಜಲ ಮತ್ತು ವಾಯರಕ್ಷಣೆಯಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಿರುವ ಭಾರತ ಶೀಘ್ರವಾಗಿ ಬಾಹ್ಯಾಕಾಶದಲ್ಲಿಯೂ ಭದ್ರತೆ ಹೆಚ್ಚಿಸಿಕೊಳ್ಳಲಿದೆ. ಭಾರತದ ಉಪಗ್ರಹಗಳನ್ನು ಅನ್ಯ ದೇಶಗಳ ಉಪಗ್ರಹದಿಂದ ರಕ್ಷಿಸಿಕೊಳ್ಳಲು ಅಂಗರಕ್ಷಕ ಉಪಗ್ರಹಗಳನ್ನು ಭಾರತ ಉಡಾಯಿಸಲಿದೆ ಎಂದು ಮೂಲಗಳು ತಿಳಿಸಿವೆ.
- ಮುಂದಿನ ವರ್ಷ ಮೊದಲ ಬಾಡಿಗಾರ್ಡ್ ಉಡಾವಣೆ
ನವದೆಹಲಿ: ನೆಲ, ಜಲ ಮತ್ತು ವಾಯರಕ್ಷಣೆಯಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಿರುವ ಭಾರತ ಶೀಘ್ರವಾಗಿ ಬಾಹ್ಯಾಕಾಶದಲ್ಲಿಯೂ ಭದ್ರತೆ ಹೆಚ್ಚಿಸಿಕೊಳ್ಳಲಿದೆ. ಭಾರತದ ಉಪಗ್ರಹಗಳನ್ನು ಅನ್ಯ ದೇಶಗಳ ಉಪಗ್ರಹದಿಂದ ರಕ್ಷಿಸಿಕೊಳ್ಳಲು ಅಂಗರಕ್ಷಕ ಉಪಗ್ರಹಗಳನ್ನು ಭಾರತ ಉಡಾಯಿಸಲಿದೆ ಎಂದು ಮೂಲಗಳು ತಿಳಿಸಿವೆ.ಇತ್ತೀಚೆಗೆ ಭಾರತದ ನೆರೆಯ ದೇಶದ ಉಪಗ್ರಹವೊಂದು ಇಸ್ರೋ ಉಪಗ್ರಹದಿಂದ ಕೇವಲ 1 ಕಿ.ಮೀ. ದೂರದಲ್ಲಿ ಹಾದು ಹೋಗುತ್ತಿತ್ತು. ಇದು ಬಾಹ್ಯಾಕಾಶದ ಭದ್ರತೆಯ ದೃಷ್ಟಿಯಿಂದ ಅತಿ ಸೂಕ್ಷ್ಮ ವಿಚಾರವಾಗಿರುವುದರಿಂದ ‘ಅಂಗರಕ್ಷಕ’ ಉಪಗ್ರಹವನ್ನು ಮುಂದಿನ ವರ್ಷದಿಂದ ಭಾರತ ಉಡಾವಣೆ ಮಾಡಲಿದೆ.
ಏನಿದು ಅಂಗರಕ್ಷಕ?:ಈ ಉಪಗ್ರಹಗಳು ಇಸ್ರೋದ ಉಪಗ್ರಹಗಳ ರಕ್ಷಕನಂತೆ ಕಾರ್ಯನಿರ್ವಹಿಸಲಿದೆ. ನಮ್ಮ ಸ್ಯಾಟಲೈಟ್‌ಗಳಿಗೆ ಆಪತ್ತು ತರುವ ವಸ್ತುಗಳನ್ನು ಬೆಳಕು ಮತ್ತು ವೇಗಗಳನ್ನು ಅಳೆಯುವ ಸೆನ್ಸರ್‌ಗಳ ಮೂಲಕ ಅಳೆದು, ಅವುಗಳನ್ನು ದೂರತಳ್ಳುತ್ತವೆ. ಇಲ್ಲವೇ ಅವುಗಳನ್ನು ನಾಶ ಸಹ ಮಾಡುವ ಸಾಮರ್ಥ್ಯ ಹೊಂದಿರಲಿವೆ.ಭಾರತವು ಈಗಾಗಲೇ 24600 ಕೋಟಿ ರು.ಗಳಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, 50 ಅಂಗರಕ್ಷಕ ಉಪಗ್ರಹಗಳನ್ನು ಗಗನಕ್ಕೆ ಹಾರಿಸಲಿವೆ. ಇದರ ಭಾಗವಾಗಿ ಮೊದಲನೆಯದ್ದು ಮುಂದಿನ ವರ್ಷ ನಭಕ್ಕೆ ಉಡಾವಣೆಯಾಗಲಿದೆ.
ಅಗತ್ಯವೇನು?:ಇತ್ತೀಚಿನ ದಿನಗಳಲ್ಲಿ ಕೇವಲ ಭೂಮಿ ಮಾತ್ರವಲ್ಲದೇ ಬಾಹ್ಯಾಕಾಶದಲ್ಲಿಯೂ ಶತ್ರುದೇಶಗಳ ಕೈಚಳಕ ಹೆಚ್ಚುತ್ತಿದೆ. ಅನ್ಯ ದೇಶಗಳ ಉಪಗ್ರಹ ನಾಶದಂತಹ ಕೆಲಸಗಳು ನಡೆಯುವ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಉಪಗ್ರಹ ರಕ್ಷಣೆಗೆ ಭಾರತ ಮುಂದಾಗಿದೆ.
ಬಾಹ್ಯಾಕಾಶದಲ್ಲಿ ಭಾರತದ 100, ನರೆ ದೇಶಗಳಾದ ಪಾಕಿಸ್ತಾನದ 8 ಮತ್ತು ಚೀನಾದ 930 ಉಪಗ್ರಹಗಳಿವೆ.