ಸಾರಾಂಶ
ಸರ್ಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಐಟಿ ನಿಯಮಗಳನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
ಮುಂಬೈ : ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಪ್ರಸಾರ ಆಗುವ ಸುಳ್ಳು ಸುದ್ದಿಯ ಪತ್ತೆಗೆ ‘ಸತ್ಯ ಪರಿಶೀಲನಾ ಘಟಕ’ ರಚಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಐಟಿ ತಿದ್ದುಪಡಿ ನಿಯಮಗಳನ್ನು ಬಾಂಬೆ ಹೈಕೋರ್ಟ್ ರದ್ದು ಮಾಡಿದೆ. ಹೈಕೋರ್ಟ್‌ನ ಈ ನಡೆ ಸರ್ಕಾರಕ್ಕೆ ಹಿನ್ನಡೆ ತಂದಿದೆ.
ಐಟಿ ನಿಯಮದಿಂದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ವಿದೂಷಕ ಕುನಾಲ್ ಕಾಮ್ರಾ ಹಾಗೂ ಕೆಲವು ಪತ್ರಕರ್ತರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು. ಮೊದಲು ಹೈಕೋರ್ಟ್‌ನ ಇಬ್ಬರು ಜಡ್ಜ್‌ಗಳು ಭಿನ್ನ ತೀರ್ಪು ನೀಡಿದ ಕಾರಣ ‘ಟೈಬ್ರೇಕರ್’ ಪೀಠ ರಚನೆ ಆಗಿತ್ತು. ಈಗ 3ನೇ ಜಡ್ಜ್ ಈ ನಿಯಮಗಳನ್ನು ಅಕ್ರಮ ಎಂದಿದ್ದು, ಅವನ್ನು ರದ್ದುಗೊಳಿಸಿದ್ದಾರೆ.
ಸತ್ಯ-ಪರಿಶೀಲನಾ ಘಟಕ (ಎಫ್‌ಸಿಯು) ಸ್ಥಾಪಿಸಲು ಕೇಂದ್ರಕ್ಕೆ ಅಧಿಕಾರ ನೀಡುವ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮಗಳು, 2023, ಸಂವಿಧಾನದ 14 (ಸಮಾನತೆ ಹಕ್ಕು) ಮತ್ತು 19 ನೇ ವಿಧಿಗಳಿಗೆ (ವಾಕ್ ಸ್ವಾತಂತ್ರ್ಯ ಹಕ್ಕು) ವಿರುದ್ಧವಾಗಿದೆ ಎಂದು ನ್ಯಾ। ಎ.ಎಸ್. ಚಂದೂರ್ಕರ್ ಹೇಳಿದ್ದಾರೆ.