ಸಾರಾಂಶ
ಕೋಝಿಕ್ಕೋಡ್: ನಿಫಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳದ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಿಸದೇ ಭಾನುವಾರ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ನಿಫಾ ಸೋಂಕಿಗೆ ಈ ವರ್ಷ ಮೊದಲ ಬಲಿಯಾಗಿದೆ.
ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು,‘ಪಂಡಿಕ್ಕಾಡ್ ಮೂಲದ 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ತೀವ್ರ ಹೃದಯಾಘಾತದಿಂದ ಬಾಲಕ ಸಾವನ್ನಪ್ಪಿದ್ದಾನೆ’ ಎಂದು ಹೇಳಿದ್ದಾರೆ. ಇನ್ನು ಬಾಲಕನ ಸಂಪರ್ಕದಲ್ಲಿದ್ದ ಪೋಷಕರನ್ನು ಐಸೋಲೆಷನ್ ಮಾಡಲಾಗಿದೆ. ಮೃತ ಬಾಲಕನ ಅಂತ್ಯಕ್ರಿಯೆಯನ್ನು ಮಾರ್ಗಸೂಚಿಗಳ ರೀತಿಯಲ್ಲಿ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.
5 ಬಾರಿ ಸೋಂಕು ಪ್ರಸರಣ:
ಕೇರಳದಲ್ಲಿ 2018ರಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ನಂತರ 2019ರ, 2021,, 2023 ಮತ್ತು ಇದೀಗ 2024ರಲ್ಲೂ ಕಾಣಿಸಿಕೊಂಡಿದೆ. ಈ ವರ್ಷ ಇದುವರೆಗೂ 5 ಪ್ರಕರಣ ದೃಢಪಟ್ಟಿದ್ದು, ಒಂದು ಸಾವು ದಾಖಲಾಗಿದೆ.2018ರಲ್ಲಿ ಮೊದಲ ಸಲ ಸೋಂಕು ಪತ್ತೆಯಾಗಿ 18 ಸೋಂಕಿತರ ಪೈಕಿ 17 ಜನರು ಸಾವನ್ನಪ್ಪಿದ್ದರು. ಅದಾದ ಬಳಿಕ 2021ರಲ್ಲಿ 1, 2023ರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ತನಕ ಕೇರಳದಲ್ಲಿ 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಆರು ಜನ ಮಾತ್ರ ಬದುಕುಳಿದಿದ್ದಾರೆ.