ಸಾರಾಂಶ
ಹುಡುಗಿಯ ರೀತಿ ವೇಷ ಹಾಕಿ ತನ್ನ ಪ್ರಯತಮೆಯ ಹೆಸರಿನಲ್ಲಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಬರೆಯಲು ಬಂದಿದ್ದ ಪ್ರಿಯತಮನ ಬಟ್ಟೆ, ಬಿಂದಿ, ಲಿಪ್‌ಸ್ಟಿಕ್ ಮ್ಯಾಚ್ ಆಯ್ತು. ಆದರೆ ಬೆರಳಚ್ಚು ಸಿಕ್ಕಿಬೀಳಿಸ್ತು
ನವದೆಹಲಿ: ಪ್ರಿಯತಮೆಯ ಪರವಾಗಿ ಪರೀಕ್ಷೆ ಬರೆಯಲು ಆಕೆಯಂತೆಯೇ ವೇಷ ಧರಿಸಿ ಬಂದಿದ್ದ ಪ್ರಿಯತಮ ಪರೀಕ್ಷಾ ಕೊಠಡಿಯಲ್ಲಿ ಸಿಕ್ಕಿಬಿದ್ದ ವಿಚಿತ್ರ ಘಟನೆ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ನಡೆದಿದೆ.
ಜ.7ರಂದು ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಆಯೋಜಿಸಿದ್ದ ಆರೋಗ್ಯ ಕಾರ್ಯಕರ್ತರ ಪರೀಕ್ಷೆಗೆ ಪರಮ್‌ಜಿತ್ ಕೌರ್ ಎಂಬಾಕೆ ಹಾಜರಾಗಬೇಕಿತ್ತು. ಆದರೆ ಆಕೆಯ ಬದಲಾಗಿ ಆಕೆಯ ಪ್ರಿಯಕರ ಅಂಗ್ರೇಜ್ ಸಿಂಗ್ ಆಕೆಯಂತೇ, ಬಟ್ಟೆ ತೊಟ್ಟು, ಲಿಪ್‌ಸ್ಟಿಕ್, ಬಿಂದಿ ಮತ್ತು ಬಳೆ ಧರಿಸಿಕೊಂಡು ಪರೀಕ್ಷಾ ಕೊಠಡಿಗೆ ತೆರಳಿದ್ದ. ಜೊತೆಗೆ, ತಾನು ಹುಡುಗಿಯಂತೆ ರೆಡಿಯಾಗಿ ಪ್ರಿಯತಮೆ ಹೆಸರಿನಲ್ಲಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದ. ಆದರೆ ಬಯೋಮೆಟ್ರಿಕ್‌ನಲ್ಲಿ ಪರಮ್‌ಜಿತ್ ಮತ್ತು ಅಂಗ್ರೇಜ್‌ರ ಬೆರಳಚ್ಚು ಹೊಂದಿಕೆಯಾಗಿಲ್ಲ.ಆಗ ಇಲ್ಲೇನೋ ಆಗಿದೆ ಎಂದು ಅರಿತ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ವೇಳೆ ಈಕೆ ಅವಳಲ್ಲ, ಅವನು ಎಂದು ಗೊತ್ತಾಗಿದೆ. ಬಳಿಕ ಕೌರ್‌ಳ ಅರ್ಜಿ ತಿರಸ್ಕರಿಸಿದ ಅಧಿಕಾರಿಗಳು ಅಂಗ್ರೇಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.