ಗುರುಗ್ರಾಮದಲ್ಲಿ ಈಗ ಸ್ಥಾಪನೆ । ಯಶಸ್ವಿಯಾದರೆ ದೇಶದೆಲ್ಲೆಡೆ ವಿಸ್ತರಣೆಗುರುಗ್ರಾಮ (ಹರ್ಯಾಣ): ಅನಿಲ ಕೊರತೆಯಿಂದಾಗಿ ಜನ ಸಿಲಿಂಡರ್‌ ಹಿಡಿದು ಗ್ಯಾಸ್‌ ಏಜೆನ್ಸಿಗಳೆದುರು ಸಾಲಲ್ಲಿ ನಿಲ್ಲುತ್ತಿರುವುದು ಸರ್ವೇಸಾಮಾನ್ಯವಾಗಿರುವ ನಡುವೆ, ಹರ್ಯಾಣದ ಗುರುಗ್ರಾಮದಲ್ಲಿ 2-3 ನಿಮಿಷದಲ್ಲಿ ಎಲ್‌ಪಿಜಿ ಅನಿಲ ಕೊಡುವ ಎಟಿಎಂ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್‌) ಸ್ಥಾಪಿಸಿದೆ.

ಇದು ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಯಶಸ್ವಿಯಾದರೆ ದೇಶದ ಇತರ ಭಾಗಗಳಿಗೆ ವಿಸ್ತರಿಸುವ ಉದ್ದೇಶವಿದೆ.

ಸೋಹ್ನಾ ಪ್ರದೇಶದಲ್ಲಿರುವ ಇದು ಇಡೀ ದಿನ ತೆರೆದಿರಲಿದೆ. ಇಲ್ಲಿ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳ ಬದಲು ಅದರ ಅರ್ಧದಷ್ಟು ತೂಕದ (15 ಕಿ.ಮೀ.), ಫೈಬರ್‌ನಿಂದ ಮಾಡಲ್ಪಟ್ಟ ಕಾಂಪೊಸಿಟ್‌ ಸಿಲಿಂಡರ್‌ಗಳಲ್ಲಿ ಅನಿಲ ಕೊಡಲಾಗುವುದು. ಸದ್ಯ ಈ ಎಟಿಎಂನಲ್ಲಿ 10 ಕೆ.ಜಿ. ಅನಿಲ ತುಂಬಿದ 10 ಸಿಲಿಂಡರ್‌ಗಳು ಇವೆ. ಇವುಗಳನ್ನು ಜನರು ನೇರವಾಗಿ ಹೋಗಿ ಪಡೆಯಬಹುದು.

ಎಟಿಎಂನಲ್ಲಿ 10 ಸಿಲಿಂಡರ್‌ ಭರ್ತಿ ಮಾಡುವಷ್ಟು ಅನಿಲ ಇರುತ್ತದೆ. ಅಲ್ಲಿನ ಖಾಲಿ ಆಗುತ್ತಿದ್ದಂತೆ ಸನಿಹದ ಗ್ಯಾಸ್‌ ಏಜೆನ್ಸಿಗೆ ಸಂದೇಶ ತಲುಪುವ ವ್ಯವಸ್ಥೆ ಮಾಡಲಾಗಿದೆ. ಕೂಡಲೇ ಏಜೆನ್ಸಿಯವರು ಎಟಿಎಂನಲ್ಲಿ ಅನಿಲ ತುಂಬುತ್ತಾರೆ.

--


ಗ್ಯಾಸ್‌ ಪಡೆಯೋದು ಹೇಗೆ?

- ನಮ್ಮ ಖಾಲಿ ಸಿಲಿಂಡರ್‌ ಅನ್ನು ಎಟಿಎಂಗೆ ಒಪ್ಪಿಸಬೇಕು

- ಎಟಿಎಂನಲ್ಲಿ ನೋಂದಾಯಿತ ಮೊಬೈಲ್‌ ನಂಬರ್‌ ಎಂಟ್ರಿ ಮಾಡಬೇಕು

- ಒಟಿಪಿ ಬರುತ್ತದೆ. ನಂತರ ಕ್ಯುಆರ್‌ ಕೋಡ್ ಮೂಲಕ ಹಣ ಕಟ್ಟಬೇಕು

- ಆಗ 10 ಕೇಜಿಯಷ್ಟು ತುಂಬಿದ ಫೈಬರ್‌ ಸಿಲಿಂಡರ್‌ ಲಭ್ಯವಾಗುತ್ತದೆ

- ಇಡೀ ಪ್ರಕ್ರಿಯೆ ಮುಗಿಯಲು ಕೇವಲ 2-3 ನಿಮಿಷ ಸಾಕಾಗುತ್ತದೆ