ಸಾರಾಂಶ
ಲಖನೌ : ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಭಿನ್ನಮತ ಭುಗಿಲೆದ್ದಿದೆ ಎಂಬ ವದಂತಿಗಳ ನಡುವೆಯೇ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಸಿಂಗ್ ಯಾದವ್ ನಿಗೂಢ ‘ಎಕ್ಸ್’ (ಟ್ವೀಟ್) ಪೋಸ್ಟ್ ಮಾಡಿದ್ದಾರೆ. ‘ಮಳೆಗಾಲದ ಆಫರ್: 100 ಶಾಸಕರನ್ನು ತನ್ನಿ, ಸರ್ಕಾರ ರಚಿಸಿ’ ಎಂಬುದೇ ಆ ಟ್ವೀಟ್!
ಅಖಿಲೇಶ್ ಈ ಟ್ವೀಟ್‌ನಲ್ಲಿ ಯಾರ ಹೆಸರನ್ನೂ ಹೇಳಿಲ್ಲವಾದರೂ ಇದು ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಶಾಸಕರನ್ನು ಉದ್ದೇಶಿಸಿ ಮಾಡಿದ ಟ್ವೀಟ್ ಎಂದು ಹೆಸರು ಹೇಳಲಿಚ್ಛಿಸದ ಎಸ್‌ಪಿ ನಾಯಕರೊಬ್ಬರು ಹೇಳಿದ್ದಾರೆ.
‘2022ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 111 ಸೀಟುಗಳನ್ನು ಗೆದ್ದಿದೆ. ನಮಗೆ ಬಿಜೆಪಿಯಲ್ಲಿ ಅತೃಪ್ತಗೊಂಡಿರುವ 100 ಶಾಸಕರ ಬೆಂಬಲ ಲಭಿಸಿದರೆ ಸುಲಭವಾಗಿ ಸರ್ಕಾರ ರಚಿಸುತ್ತೇವೆ’ ಎಂದು ಆ ನಾಯಕ ಹೇಳಿದ್ದಾರೆ.
403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 202 ಸ್ಥಾನಗಳು ಬೇಕು. ಬಿಜೆಪಿಯಲ್ಲಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹಾಗೂ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಅವರು ಯೋಗಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವರಿಷ್ಠರನ್ನು ಭೇಟಿಯಾಗುತ್ತಿದ್ದಾರೆ.