ಹಣಕ್ಕಾಗಿ ಅಣ್ಣ-ತಂಗಿ, ಪತಿ-ಪತ್ನಿಯೇ ಮದುವೆ: ಹಾತ್ರಸ್‌ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ

| Published : Oct 08 2024, 01:01 AM IST / Updated: Oct 08 2024, 04:55 AM IST

ಸಾರಾಂಶ

ಸರ್ಕಾರಿ ಸಾಮೂಹಿಕ ವಿವಾಹದಲ್ಲಿ ಹಣ ಪಡೆಯಲು ಅಣ್ಣ-ತಂಗಿ ಮತ್ತು ಈಗಾಗಲೇ ಮದುವೆಯಾಗಿದ್ದ ಪತಿ-ಪತ್ನಿಗಳು ಮತ್ತೆ ಮದುವೆಯಾಗಿರುವ ಆಘಾತಕಾರಿ ಘಟನೆ ಹಾತ್ರಸ್‌ನಲ್ಲಿ ಬೆಳಕಿಗೆ ಬಂದಿದೆ. ದೂರಿನ ಅನ್ವಯ ಉಪ ವಿಭಾಗೀಯ ನ್ಯಾಯಾಧೀಶರು ತನಿಖೆಗೆ ಆದೇಶಿಸಿದ್ದಾರೆ.

ಹಾತ್ರಸ್‌ (ಉ.ಪ್ರ.): ಸರ್ಕಾರ ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಆದರೆ ಸಿಗುವ ಹಣಕ್ಕಾಗಿ ಅಣ್ಣ-ತಂಗಿ, ಪತಿ-ಪತ್ನಿಯೇ ಮದುವೆಯಾದ ಆಘಾತಕಾರಿ ಘಟನೆ ಉತ್ತರಪ್ರದೇಶದ ಹಾತ್ರಸ್‌ನಲ್ಲಿ ನಡೆದಿದೆ. ಈ ಬಗ್ಗೆ ಸ್ಥಳೀಯರಿಂದ ದೊರೆತ ದೂರಿನ ಅನ್ವಯ ಉಪ ವಿಭಾಗೀಯ ನ್ಯಾಯಾಧೀಶರು ಕ್ರಮ ಕೈಗೊಂಡಿದ್ದು, ತನಿಖೆಗೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?: ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯ ಅಡಿಯಲ್ಲಿ ವಧುವಿನ ಬ್ಯಾಂಕ್‌ ಖಾತೆಗೆ 35,000 ರು. ಜಮೆ ಮಾಡಿ, ಅಗತ್ಯ ವಸ್ತುಗಳ ಖರೀದಿಗೆ 10,000 ರು. ಹಾಗೂ ಮದುವೆ ಖರ್ಚಿಗೆ 6,000 ರು. ನೀಡಲಾಗುವುದು. ಈ ಹಣದ ಆಸೆಯಿಂದ ಸಿಕಂದರಾರಾವ್‌ನ ಈಗಾಗಲೇ ಮದುವೆಯಾಗಿದ್ದ ಎರಡು ಜೋಡಿ ಮತ್ತು ಒಂದು ಅಣ್ಣ-ತಂಗಿ ಜೋಡಿ ಮದುವೆಯಾಗಿರುವುದು ಕಂಡುಬಂದಿದೆ.

ಯೋಜನೆಯ ಲಾಭ ಪಡೆಯುವ ಸಲುವಾಗಿ ಪುರಸಭೆ ಸಿಬ್ಬಂದಿ ಈ ಮದುವೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.