ಪುತ್ರಿ ಕವಿತಾರನ್ನೇ ಪಕ್ಷದಿಂದ ಸಸ್ಪೆಂಡ್‌ಮಾಡಿದ ಬಿಆರ್‌ಎಸ್‌ ಅಧ್ಯಕ್ಷ ಕೆಸಿಆರ್‌!

| Published : Sep 03 2025, 01:01 AM IST

ಪುತ್ರಿ ಕವಿತಾರನ್ನೇ ಪಕ್ಷದಿಂದ ಸಸ್ಪೆಂಡ್‌ಮಾಡಿದ ಬಿಆರ್‌ಎಸ್‌ ಅಧ್ಯಕ್ಷ ಕೆಸಿಆರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸ್ವತಃ ತಮ್ಮ ಪುತ್ರಿ ಕವಿತಾ ಅವರನ್ನೇ ಬಿಆರ್‌ಎಸ್‌ ಪಕ್ಷದಿಂದ ಅಮಾನತು ಮಾಡಿ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಆದೇಶ ಹೊರಡಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪಹೈದರಾಬಾದ್: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸ್ವತಃ ತಮ್ಮ ಪುತ್ರಿ ಕವಿತಾ ಅವರನ್ನೇ ಬಿಆರ್‌ಎಸ್‌ ಪಕ್ಷದಿಂದ ಅಮಾನತು ಮಾಡಿ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಆದೇಶ ಹೊರಡಿಸಿದ್ದಾರೆ. ಕಾಳೇಶ್ವರಂ ಯೋಜನೆಯ ವಿಚಾರವಾಗಿ ತಮ್ಮ ಸೋದರ ಸಂಬಂಧಿಗಳ ವಿರುದ್ಧವೇ ಶಾಸಕಿ ಕವಿತಾ ಆರೋಪ ಮಾಡಿದ ಬೆನ್ನಲ್ಲೇ ಪಕ್ಷ ಈ ನಿರ್ಧಾರ ಕೈಗೊಂಡಿದೆ.

ಕವಿತಾ ಹೇಳಿದ್ದೇನು:

ಕೆಸಿಆರ್‌ ಸಿಎಂ ಆಗಿದ್ದಾಗ ನಿರ್ಮಾಣಗೊಂಡ ಕಾಳೇಶ್ವರಂ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಈ ಕುರಿತು ಸಿಬಿಐ ತನಿಖೆಗೆ ಹಾಲಿ ಕಾಂಗ್ರೆಸ್‌ ಸರ್ಕಾರ ಆದೇಶಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕವಿತಾ, ಕೆಸಿಆರ್ ಜೊತೆಗಿದ್ದ ಕೆಲವು ವ್ಯಕ್ತಿಗಳೇ ಅವರ ಹೆಸರು ಬಳಸಿಕೊಂಡು ಹಲವು ರೀತಿಯಲ್ಲಿ ಲಾಭ ಮಾಡಿಕೊಂಡಿದ್ದಾರೆ. ಇದರ ಪರಿಣಾಮ ಕೆಸಿಆರ್‌ ಹೆಸರಿಗೆ ಕಳಂಕ ಅಂಟಿಕೊಂಡಿದೆ. ಈ ನೀರಾವರಿ ಯೋಜನೆಯಲ್ಲಿ ತಮ್ಮ ತಂದೆಗೆ ಕೆಟ್ಟ ಹೆಸರು ಬರಲು ಹರೀಶ್‌ ರಾವ್‌ ಮತ್ತು ಸಂತೋಷ್‌ ಕುಮಾರ್‌ ಕಾರಣ. ಕೆಸಿಆರ್‌ ಜನಸೇವೆಯಲ್ಲಿ ತೊಡಗಿದ್ದಾಗ, ಇವರಿಬ್ಬರೂ ತಮ್ಮ ಸಂಪತ್ತು ವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಬ್ಬರೂ ಭ್ರಷ್ಟಾಚಾರದ ಅನಕೊಂಡಾಗಳು ಎಂದು ನೇರವಾಗಿ ಹಗರಣ ನಡೆದಿದ್ದನ್ನು ಒಪ್ಪಿಕೊಂಡಿದ್ದರು.

ಇದರ ಜೊತೆಗೆ, ಕೆಲ ದಿನಗಳ ಹಿಂದೆ ‘ಕೆಸಿಆರ್ ಸಿಬಿಐ ತನಿಖೆ ಎದುರಿಸಬೇಕಾದ ಪರಿಸ್ಥಿತಿ ಬಂದಾಗ, ಬಿಆರ್‌ಎಸ್ ಪಕ್ಷ ಉಳಿಯುತ್ತದೆಯೋ ಇಲ್ಲವೋ ಎಂಬುದು ಮುಖ್ಯವೇ?’ ಎಂದೂ ಕವಿತಾ ಟೀಕಿಸಿದ್ದರು.

ಮುನಿಸು: ಕಳೆದ ವರ್ಷ ಅಬಕಾರಿ ಪ್ರಕರಣದಲ್ಲಿ 6 ತಿಂಗಳ ಜೈಲುವಾಸ ಅನುಭವಿಸಿ ಹೊರಬಂದ ಕವಿತಾ ವಿರುದ್ಧ ಪಕ್ಷದಲ್ಲಿ ಆಕ್ರೋಶದ ಅಲೆ ವ್ಯಕ್ತವಾಗಿತ್ತು. ಜೊತೆಗೆ ಪಕ್ಷದ ಬ್ಯಾನರ್‌ ಬಳಸದೆ ತಮ್ಮದೇ ಆದ ಸಾಂಸ್ಕೃತಿಕ ಸಂಸ್ಥೆ ‘ತೆಲಂಗಾಣ ಜಾಗೃತಿ’ ಬ್ಯಾನರ್‌ ಅಡಿಯಲ್ಲಿ ರಾಜಕೀಯ ಚಟುವಟಿಕೆ ನಡೆಸಿ, ಪಕ್ಷಕ್ಕೆ ತೀವ್ರ ಮುಜುಗರ ತರುವ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲ ದಿನಗಳ ಹಿಂದೆ ಪಕ್ಷದ ಇತರೆ ಕೆಲವು ಹುದ್ದೆಗಳಿಂದ ತೆಗೆದು ಹಾಕಲಾಗಿತ್ತು.