ಸಾರಾಂಶ
ಲೋಕಸಭೆ ಚುನಾವಣೆಗೆ ಚುನಾವಣೋತ್ತರ ಮೈತ್ರಿ ಮಾತ್ರ ಮಾಡಿಕೊಳ್ಳುವುದಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಘೋಷಿಸಿದ್ದಾರೆ. ಇದು ಇಂಡಿಯಾ ಕೂಟಕ್ಕೆ ದೊಡ್ಡ ಆಘಾತವೆಂದೇ ಪರಿಗಣಿತವಾಗಿದೆ.
ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ವರಿಷ್ಠೆ ಮಾಯಾವತಿ ಹೇಳಿದ್ದಾರೆ.
ಇದು ಉತ್ತರಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್ಪಿ ಪಕ್ಷಗಳನ್ನು ಜೊತೆಗೂಡಿಸಿಕೊಂಡು ಚುನಾವಣಾ ಕಣಕ್ಕೆ ಇಳಿಯಲು ಉದ್ದೇಶಿಸಿದ್ದ ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಬಹುದೊಡ್ಡ ಶಾಕ್ ನೀಡಿದೆ.
ಸೋಮವಾರ ಇಲ್ಲಿ ತಮ್ಮ ಜನ್ಮದಿನದ ಕಾರ್ಯಕ್ರಮದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ, ಮಾಯಾವತಿ, ‘ರಾಜಕೀಯದಿಂದ ತಾವು ನಿವೃತ್ತಿಯಾಗುವ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದರು.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಬಿಎಸ್‌ಪಿ ಸ್ಪರ್ಧಿಸಲಿದೆ.
ಚುನಾವಣೆಯ ನಂತರ ಮೈತ್ರಿಯ ಬಗ್ಗೆ ಗಣನೆಗೆ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.