ಬಜೆಟ್‌ನಲ್ಲಿ ಹಳ್ಳಿಗಳಲ್ಲಿ ಕುಡಿವ ನೀರು ಯೋಜನೆ ಜಲಶಕ್ತಿಗೆ ಭರ್ಜರಿ 74000 ಕೋಟಿ ರು.

| N/A | Published : Feb 02 2025, 01:01 AM IST / Updated: Feb 02 2025, 05:00 AM IST

ಸಾರಾಂಶ

ಈ ಬಾರಿಯ ಬಜೆಟ್‌ನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ 2025-26ರ ಅವಧಿಗೆ ಬರೋಬ್ಬರಿ 74,226 ಕೋಟಿ ರು. ನೀಡಲಾಗಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಈ ಇಲಾಖೆಗೆ 77,390 ಕೋಟಿ ರು. ಅನುದಾನ ನೀಡಲಾಗಿದ್ದು, ಈ ಬಾರಿ ಅದು ಕೊಂಚ ಇಳಿಕೆಯಾಗಿದೆ.

ನವದೆಹಲಿ : ಈ ಬಾರಿಯ ಬಜೆಟ್‌ನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ 2025-26ರ ಅವಧಿಗೆ ಬರೋಬ್ಬರಿ 74,226 ಕೋಟಿ ರು. ನೀಡಲಾಗಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಈ ಇಲಾಖೆಗೆ 77,390 ಕೋಟಿ ರು. ಅನುದಾನ ನೀಡಲಾಗಿದ್ದು, ಈ ಬಾರಿ ಅದು ಕೊಂಚ ಇಳಿಕೆಯಾಗಿದೆ.

ಜಲ ಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನಕ್ಕೆ 21,640 ಕೋಟಿ ರು. ಇದ್ದ ಅನುದಾನವನ್ನು 25,276 ಕೋಟಿ ರು.ಗೆ ಏರಿಸಲಾಗಿದೆ. ನಮಾಮಿ ಗಂಗೆ ಮಿಷನ್‌-2ರ ಅಡಿಯಲ್ಲಿ ನದಿಯ ಸ್ವಚ್ಛತೆ ಹಾಗೂ ಪುನರುಜ್ಜೀವನಕ್ಕೆ 3,400 ಕೋಟಿ ರು. ನೀಡಲಾಗಿದೆ.

ಗ್ರಾಮೀಣ ಪ್ರದೇಶಗಳ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸೌಲಭ್ಯ ಒದಗಿಸುವ ಜಲ ಜೀವನ ಮಿಷನ್‌ನ ಅಡಿಯಲ್ಲಿ 15 ಕೋಟಿ ಮನೆಗಳಿಗೆ(ದೇಶದ ಗ್ರಾಮೀಣ ಭಾಗದ ಶೇ.20ರಷ್ಟು) ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಮಾಹಿತಿ ನೀಡಿದ್ದು, ಈ ಯೋಜನೆಯನ್ನು 2028ರ ವರೆಗೆ ವಿಸ್ತರಿಸುವುದಾಗಿ ಘೋಷಿಸಿದರು. ಇದಕ್ಕಾಗಿ ಈ ಬಾರಿ 67,000 ಕೋಟಿ ರು. ಮೀಸಲಿಡಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ 22,694 ಕೋಟಿ ರು. ಇತ್ತು.

‘ಜಲ ಜೀವನ ಯೋಜನೆಯ ಮುಖ್ಯ ಗುರಿಯು ಮೂಲಸೌಕರ್ಯದ ಗುಣಮಟ್ಟ, ಜನ್‌ ಭಾಗೀದಾರಿ ಯೋಜನೆಯ ಮೂಲಕ ಗ್ರಾಮೀಣ ಭಾಗಗಳಿಗೆ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಆಗಿರಲಿದೆ. ಸುಸ್ಥಿರ ಮತ್ತು ಜನ ಕೇಂದ್ರಿತ ನೀರು ವಿತರಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಸೀತಾರಾಮನ್‌ ಹೇಳಿದ್ದಾರೆ.