ಸಾರಾಂಶ
ಸಂಸತ್ತಿನ ಬಜೆಟ್ ಅಧಿವೇಶನವು ಜ.31ರಿಂದ ಆರಂಭವಾಗಲಿದ್ದು, ಏ.4ರವರೆಗೆ ಒಟ್ಟು 2 ಹಂತದಲ್ಲಿ ನಡೆಯಲಿದೆ.
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜ.31ರಿಂದ ಆರಂಭವಾಗಲಿದ್ದು, ಏ.4ರವರೆಗೆ ಒಟ್ಟು 2 ಹಂತದಲ್ಲಿ ನಡೆಯಲಿದೆ.
ಜ.31ರಂದು ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಬಳಿಕ ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಾಗುವುದು. ಫೆ.1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಲೋಕಸಭೆಗೆ 2 ದಿನಗಳ (ಫೆ.3-4) ಮತ್ತು ರಾಜ್ಯಸಭೆಗೆ 3 ದಿನಗಳ ಅವಕಾಶ ನೀಡಲಾಗಿದೆ. ಫೆ.6ರಂದು ಪ್ರಧಾನಿ ಮೋದಿಯವರು ಉತ್ತರಿಸುವ ನಿರೀಕ್ಷೆಯಿದೆ.
ಬಜೆಟ್ ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಜ.30ರಂದು ಸರ್ವಪಕ್ಷ ಮುಖಂಡರ ಸಭೆಯನ್ನು ಕರೆದಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಭಾಗ ಜ.31ರಿಂದ ಫೆ.13ರವರೆಗೆ ನಡೆಯಲಿದೆ.ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಫೆ.13ರಿಂದ ಸಂಸತ್ ಅಧಿವೇಶನಕ್ಕೆ ವಿರಾಮ ನೀಡಲಾಗಿದೆ. ವಿವಿಧ ಸಚಿವಾಲಯಗಳ ಅನುದಾನ ಬೇಡಿಕೆ ಕುರಿತು ಮಾ.10ರಂದು ಮತ್ತೆ ಚರ್ಚೆ ನಡೆಯಲಿದೆ. ಏ.4ರಂದು ಬಜೆಟ್ ಅಧಿವೇಶನವು ಮುಕ್ತಾಯಗೊಳ್ಳಲಿದ್ದು, ಒಟ್ಟು 27 ದಿನ ಕಲಾಪಗಳು ನಡೆಯಲಿವೆ.