ಸಾರಾಂಶ
ನವದೆಹಲಿ: ಹಿಂಗಾರು ಬೆಳೆಗಾರರಿಗೆ ಕೈಗೆಟುಕುವ ದರದಲ್ಲಿ ಕೃಷಿ ಪೋಷಕಾಂಶಗಳನ್ನು ವಿತರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲೆ 24474 3 ಕೋಟಿ ರು. ಸಬ್ಸಿಡಿಯನ್ನು ಘೋಷಿಸಿದೆ.
ರಸಗೊಬ್ಬರ ತಯಾರಕರು/ಆಮದುದಾರರ ಮೂಲಕ ರೈತರಿಗೆ ಪಿ&ಕೆ ರಸಗೊಬ್ಬರದ 28 ಗ್ರೇಡ್‌ಗಳನ್ನು ಸಬ್ಸಿಡಿ ದರದಲ್ಲಿ ಒದಗಿಸುವುದು ಇದರ ಉದ್ದೇಶವಾಗಿದ್ದು, ಇದು 2024ರ ಅಕ್ಟೋಬರ್‌ನಿಂದ 2025ರ ಮಾರ್ಚ್‌ವರೆಗೆ ಅನ್ವಯಿಸುತ್ತದೆ.
ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಕೇಂದ್ರದಿಂದ ₹ 79 ಸಾವಿರ ಕೋಟಿ ಅನುದಾನ
ನವದೆಹಲಿ: ಬುಡಕಟ್ಟು ಸಮುದಾಯದ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ‘ಪ್ರಧಾನಮಂತ್ರಿ ಜನಜಾತೀಯ ಉನ್ನತ್ ಗ್ರಾಮ್ ಯೋಜನೆ’ಯಡಿಯಲ್ಲಿ 79,156 ಕೋಟಿ ರು. ಅನುದಾನ ಬಿಡುಗಡೆಗೆ ಕೇಂದ್ರ ಸಂಪುಟ ಅನುಮೋದಿಸಿದೆ.
ಕೇಂದ್ರ ಸರ್ಕಾರದ ಈ ಯೋಜನೆ ಮೂಲಕ 63 ಸಾವಿರ ಹಳ್ಳಿಗಳಲ್ಲಿ ನೆಲೆಸಿರುವ 5 ಕೋಟಿ ಬುಡಕಟ್ಟು ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿನ ಬುಡಕಟ್ಟು ಸಮುದಾಯದ ಜನರಿಗೆ ಈ ಯೋಜನೆಯ ದೊರೆಯಲಿದ್ದು, 549 ಜಿಲ್ಲೆಯ 2740 ಬ್ಲಾಕ್‌ಗಳಿಗೆ ಇದರ ಪ್ರಯೋಜನ ಸಿಗಲಿದೆ.
ಪಿಎಂ-ಆಶಾ ಯೋಜನೆಗೆ 35000 ಕೋಟಿ ನೆರವು
ನವದೆಹಲಿ: ರೈತರಿಗೆ ಉತ್ತಮ ಬೆಲೆ ಒದಗಿಸಲು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ನಿಯಂತ್ರಿಸುವ ಸಲುವಾಗಿ 35,000 ಕೋಟಿ ರು.ವೆಚ್ಚದ ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ (ಪಿಎಂ-ಆಶಾ) ಯೋಜನೆಯನ್ನು ಮುಂದುವರೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ರೈತರು ಮತ್ತು ಗ್ರಾಹಕರಿಗೆ ಉಪಯೋಗವಾಗುವಂತೆ ಬೆಲೆ ಬೆಂಬಲ ಯೋಜನೆ (ಪಿಎಸ್‌ಎಸ್) ಮತ್ತು ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್)ಯನ್ನು ಒಗ್ಗೂಡಿಸಲಾಗಿದೆ. ಇದರಿಂದಾಗಿ ಪಿಎಂ-ಆಶಾ ಯೋಜನೆ ಪಿಎಸ್‌ಎಸ್, ಪಿಎಸ್‌ಎಫ್, ಬೆಲೆ ಕೊರತೆ ಪಾವತಿ ಯೋಜನೆಯ(ಪಿಒಪಿಎಸ್), ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ(ಎಂಐಎಸ್) ಅಂಶಗಳನ್ನು ಒಳಗೊಂಡಿರಲಿದೆ.