ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಹೊಸ ಅತಿಥಿ: 'ದೀಪಜ್ಯೋತಿ'ಯ ಆಗಮನ!

| Published : Sep 15 2024, 01:53 AM IST / Updated: Sep 15 2024, 08:39 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಗೋವು ಕರುವಿಗೆ ಜನ್ಮ ನೀಡಿದ್ದು, ಕರುವಿಗೆ 'ದೀಪಜ್ಯೋತಿ' ಎಂದು ನಾಮಕರಣ ಮಾಡಲಾಗಿದೆ. ಕರುವಿನ ಹಣೆಯ ಮೇಲೆ ಬೆಳಕಿನ ಚಿಹ್ನೆ ಇರುವುದರಿಂದ ಈ ಹೆಸರು ನೀಡಲಾಗಿದೆ.

 ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಅವರ ‘7-ಲೋಕ ಕಲ್ಯಾಣ‘ ಮಾರ್ಗದ ನಿವಾಸಕ್ಕೆ ‘ದೀಪಜ್ಯೋತಿ’ ಎಂಬ ಹೆಸರಿನ ಕರು ಹೊಸ ಸದಸ್ಯೆಯಾಗಿ ಸೇರ್ಪಡೆಗೊಂಡಿದೆ! ಹೌದು. ಈ ಸದಸ್ಸ ಬೇರಾರೂ ಅಲ್ಲ. ಒಂದು ಪುಟ್ಟ ಕರು!!

ಈ ಬಗ್ಗೆ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಮೋದಿ, ‘ಗೌ ಸರ್ವಸುಖ ಪ್ರದಃ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಪ್ರಧಾನಿ ನಿವಾಸದ ಆವರಣದಲ್ಲಿ ಗೋಮಾತೆಯು ಕರುವಿಗೆ ಜನ್ಮ ನೀಡಿದ್ದಾಳೆ. ಅದರ ಹಣೆಯ ಮೇಲೆ ಬೆಳಕಿನ ಚಿಹ್ನೆ ಇರುವ ಕಾರಣ ದೀಪಜ್ಯೋತಿ ಎಂದು ಹೆಸರಿಸಿದ್ದೇನೆ’ ಎಂದು ಬರೆದಿದ್ದಾರೆ.

ಜೊತೆಗೆ ಕರುವಿನೊಂದಿಗೆ ತಾವು ಆಡುತ್ತಿರುವ ವಿಡಿಯೋ ಹಾಗೂ ಅದನ್ನು ಮುದ್ದಿಸುತ್ತಿರುವ, ಎತ್ತಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಸಂಕ್ರಮಣದ ವೇಳೆಯೂ ಮೋದಿ ಅವರು ತಮ್ಮ ನಿವಾಸದಲ್ಲಿ ಗೋಪೂಜೆ ಮಾಡಿ ಗಮನ ಸೆಳೆದಿದ್ದರು.