ಸಾರಾಂಶ
ಪಿಟಿಐ ನಲ್ಬರಿ (ಅಸ್ಸಾಂ) : ‘2014ರಲ್ಲಿ ಭರವಸೆ, 2019ರಲ್ಲಿ ವಿಶ್ವಾಸ ಮತ್ತು 2024ರಲ್ಲಿ ಭರವಸೆಯೊಂದಿಗೆ ಜನರ ಬಳಿಗೆ ಹೋಗಿದ್ದೆ. ಉದ್ದೇಶಗಳು ಸರಿಯಾಗಿದ್ದಾಗ ಫಲಿತಾಂಶಗಳು ಸಹ ಉತ್ತಮವಾಗಿರುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರತಿಪಾದಿಸಿದ್ದಾರೆ.
ಇಲ್ಲಿನ ಬೋರ್ಕುರಾ ಮೈದಾನದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ನಾನು ನೀಡಿರುವ ಗ್ಯಾರಂಟಿಗಳು ದೇಶಾದ್ಯಂತ ಅನ್ವಯವಾಗಲಿವೆ. ನಾನು ಈ ಗ್ಯಾರಂಟಿಗಳನ್ನು ಈಡೇರಿಸುವ ಗ್ಯಾರಂಟಿ ನೀಡುತ್ತೇನೆ. ಪ್ರಣಾಳಿಕೆಯಲ್ಲಿ ನೀಡಲಾದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು’ ಎಂದು ಘೋಷಿಸಿದರು.
ತಮ್ಮ ಮಾತಿಗೆ ಉದಾಹರಣೆ ನೀಡಿದ ಅವರು, ‘ಈಶಾನ್ಯವು ಮೋದಿಯವರ ಭರವಸೆಗೆ ಸಾಕ್ಷಿಯಾಗಿದೆ ಏಕೆಂದರೆ ಕಾಂಗ್ರೆಸ್ ಈ ಪ್ರದೇಶಕ್ಕೆ ಸಮಸ್ಯೆಗಳನ್ನು ಮಾತ್ರ ನೀಡಿತು. ಆದರೆ ಬಿಜೆಪಿ ಅದನ್ನು ಅವಕಾಶಗಳ ತಾಣವನ್ನಾಗಿ ಮಾಡಿದೆ’ ಎಂದರು.
‘ಇಲ್ಲಿ ಕಾಂಗ್ರೆಸ್ ಬಂಡುಕೋರರನ್ನು ಹೆಚ್ಚಿಸಿತು ಆದರೆ ಮೋದಿ ಜನರನ್ನು ಅಪ್ಪಿಕೊಂಡು ಶಾಂತಿಯನ್ನು ತಂದರು. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸಾಧಿಸಲಾಗದ್ದನ್ನು ಮೋದಿ ಅವರು ಹತ್ತು ವರ್ಷಗಳಲ್ಲಿ ಸಾಧಿಸಿದ್ದಾರೆ’ ಎಂದು ಹೇಳಿಕೊಂಡರು.
ಇನ್ನು ತಮ್ಮ ಗ್ಯಾರಂಟಿ ಭಸವಸೆಗಳ ಬಗ್ಗೆ ಮಾತನಾಡಿದ ಅವರು, ‘70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಇದರಿಂದ ಕುಟುಂಬಕ್ಕೆ ಹೊರೆಯಾಗುವುದಿಲ್ಲ. ಈ ನಿಮ್ಮ ಮಗ (ಮೋದಿ) ನಿಮ್ಮ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುತ್ತಾನೆ’ ಎಂದರುಅಲ್ಲದೆ, ‘ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು. ಎನ್‌ಡಿಎ ಸರ್ಕಾರವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ನಲ್ಲಿ ನಂಬಿಕೆ ಹೊಂದಿದೆ ಮತ್ತು ಪ್ರತಿಯೊಬ್ಬ ನಾಗರಿಕನು ಯಾವುದೇ ತಾರತಮ್ಯವಿಲ್ಲದೆ ಅವರು ಅರ್ಹವಾದ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ’ ಎಂದು ಅವರು ಹೇಳಿದರು.‘ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ 3 ಕೋಟಿಗೂ ಅಧಿಕ ಮಹಿಳೆಯರನ್ನು ‘ಲಖಪತಿ ದೀದಿ’ಗಳನ್ನಾಗಿ ಮಾಡಲಾಗುವುದು ಮತ್ತು ಸೋಲಾರ್ ಪ್ಯಾನೆಲ್‌ಗಳನ್ನು ಒದಗಿಸುವುದರಿಂದ ಜನರ ವಿದ್ಯುತ್ ಬಿಲ್ ಕೂಡ ಶೂನ್ಯಕ್ಕೆ ಬರುತ್ತದೆ’ ಎಂದು ಅವರು ಹೇಳಿದರು.