ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ ಶನಿವಾರ ನಡೆಸಲು ನಿರ್ಧಾರ

| Published : Apr 23 2025, 12:31 AM IST

ಸಾರಾಂಶ

ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಚ ಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ಅಂತ್ರಕ್ರಿಯೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.

ಇಂದಿನಿಂದ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನ

ವ್ಯಾಟಿಕನ್‌ ಸಿಟಿ: ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಚ ಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ಅಂತ್ರಕ್ರಿಯೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.

ವ್ಯಾಟಿಕನ್‌ನಲ್ಲಿ ಮಂಗಳವಾರ ನಡೆದ ಕಾರ್ಡಿನಲ್‌ಗಳ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ, ಪೋಪ್‌ರ ಮೃತದೇಹವನ್ನು ಸೇಂಟ್ ಪೀಟರ್ಸ್ ಬೆಸಿಲಿಕಾಗೆ ತಂದ ಬಳಿಕ ಬುಧವಾರದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.

ಪೋಪ್‌ರ ಅಂತ್ಯಕ್ರಿಯೆಯಲ್ಲಿ ತಾವು ಹಾಗೂ ಪತ್ನಿ ಮೆಲಾನಿಯಾ ಭಾಗಿಯಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿದ್ದಾರೆ. ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್‌ ಮಿಲೀ ಕೂಡ ಆಗಮಿಸುವ ನಿರೀಕ್ಷೆಯಿದೆ. ಬಹುಕಾಲದಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಅವರು ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಚೇತರಿಸಿಕೊಳ್ಳುತ್ತಿದ್ದರು. ಭಾನುವಾರದ ಈಸ್ಟರ್‌ನಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ಆಶೀರ್ವದಿಸಿದ್ದರು. ಅದರ ಮರುದಿನ ಸ್ಟ್ರೋಕ್‌ನಿಂದಾಗಿ ಕೋಮಾಗೆ ಜಾರಿದ್ದು, ಹೃದಯಾಘಾತದಿಂದ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

==

ಪೋಪ್‌ರ ಪಾರ್ಥಿವ ಶರೀರದ ಮೊದಲ ಫೋಟೋ ಬಿಡುಗಡೆ

ವ್ಯಾಟಿಕನ್‌ ಸಿಟಿ: ಕ್ರೈಸ್ತರ ಪರಮೋಚ್ಚ ಧರ್ಮಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ನಿಧನಾನಂತರದ ಮೊದಲ ಫೋಟೋವನ್ನು ಬಿಡುಗಡೆ ಮಾಡಲಾಗಿದೆ.ಪೋಪ್‌ ಅವರು ವಾಸವಿದ್ದ ಡೊಮಸ್ ಸಾಂತಾ ಮಾರ್ಟಾ ಹೋಟೆಲ್‌ನಲ್ಲಿ, ಕೆಂಪು ವಸ್ತ್ರ ಹಾಗೂ ಕಿರೀಟ ತೊಡಿಸಿರುವ ಫ್ರಾನ್ಸಿಸ್‌ರ ಪಾರ್ಥಿವ ಶರೀರವನ್ನು ಕಟ್ಟಿಗೆಯ ಶವಪೆಟ್ಟಿಗೆಯಲ್ಲಿ ಇರಿಸಲಾಗಿದ್ದು, ಅದರ ಎದುರು ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಪ್ರಾರ್ಥಿಸುತ್ತಿರುವುದನ್ನು ಆ ಫೋಟೋದಲ್ಲಿ ಕಾಣಬಹುದಾಗಿದೆ.