ಸಾರಾಂಶ
ಪ್ರಯಾಗ್‌ರಾಜ್: ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ ಕುರಿತ ತಮ್ಮ ಕಳಕಳಿಯನ್ನು ಮತ್ತೊಮ್ಮೆ ಪುನರುಚ್ಚರಿಸಿರುವ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶವ್ಯಾಪಿ ಜಾತಿಗಣತಿಗೆ ಮತ್ತೊಮ್ಮೆ ಆಗ್ರಹ ಮಾಡಿದ್ದಾರೆ.
ಇಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ರಾಹುಲ್, ‘ನೀತಿಗಳ ರಚನೆಗೆ ಜಾತಿಗಣತಿ ಅಡಿಪಾಯವಿದ್ದಂತೆ ಎಂದು ಕಾಂಗ್ರೆಸ್ ನಂಬಿದೆ. ಜಾತಿಗಣತಿಗೆ ಆಗ್ರಹಿಸುವ ಮೂಲಕ ಸಂವಿಧಾನ ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಸಂವಿಧಾನದ ರಕ್ಷಣೆ ಬಡವರು, ಕಾರ್ಮಿಕರು, ಬುಡಕಟ್ಟು ಜನಾಂಗದವರಿಂದ ಆಗುತ್ತಿದೆಯೇ ಹೊರತು ಅದಾನಿಗಳಂತಹ ಉದ್ಯಮಿಗಳಿಂದಲ್ಲ ಎಂದಿದ್ದಾರೆ. ಇದೇ ವೇಳೆ ದೇಶದ ಶೇ.90ರಷ್ಟು ಜನರಿಗೆ ಪಾಲ್ಗೊಳ್ಳುವಿಕೆಯ ಹಕ್ಕು ಸಿಗದಿದ್ದರೆ ಸಂವಿಧಾನದ ರಕ್ಷಣೆ ಸಾಧ್ಯವಿಲ್ಲ. ಆದ ಕಾರಣ ಜಾತಿಗಣತಿ ಅತ್ಯಗತ್ಯ ಎಂದಿರುವ ಅವರು, ಇದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳೀದ್ದಾರೆ.
ಮಿಸ್ ಇಂಡಿಯಾ ಆಗಿಲ್ಲ: ಈ ನಡುವೆ ಈವರೆಗೆ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರ ಪಟ್ಟಿ ನೊಡಿದೆ. ಆದರೆಲ್ಲಿ ದಲಿತ, ಆದಿವಾಸಿ ಅಥವಾ ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮಹಿಳೆಯೂ ಇರಲಿಲ್ಲ. ಆದರೆ ಮಾಧ್ಯಮಗಳು ಹಾಡು, ಕುಣಿತ, ಕ್ರಿಕೆಟ್, ಬಾಲಿವುಡ್ ಬಗ್ಗೆ ಮಾತಾಡುತ್ತವೆಯೇ ಹೊರತು ರೈತರು ಮತ್ತು ಕಾರ್ಮಿಕರ ಬಗ್ಗೆ ಮಾತಾಡುವುದಿಲ್ಲ’ ಎಂದು ರಾಹುಲ್ ಕಿಡಿಕಾರಿದ್ದಾರೆ.
ಕೆಲ ದಿನಗಳ ಹಿಂದೆ ರಾಹುಲ್, ‘ದೇಶದ ಹಿರಿಯ ಐಎಎಸ್ ಅಧಿಕಾರಿಗಳ ಪೈಕಿ ಎಸ್‌ಸಿ, ಎಸ್ಟಿ, ಒಬಿಸಿಗೆ ಸೇರಿದವರೂ ಯಾರೂ ಇಲ್ಲ. ಅದೇ ರೀತಿ ಖಾಸಗಿ ವಲಯದ ಕಂಪನಿಗಳ ಉನ್ನತ ಹುದ್ದೆಗಳಲ್ಲಿಯೂ ಸಹ ಮೇಲ್ವರ್ಗದವರೇ ತುಂಬಿದ್ದಾರೆ ಎಂದು ಆರೋಪಿಸಿದ್ದರು.