ಸಿಂಹ, ಹುಲಿ ರಕ್ಷಣೆಗೆ ದೇಶಗಳ ಒಕ್ಕೂಟ: ಸಂಪುಟ ಅಸ್ತು

| Published : Mar 01 2024, 02:16 AM IST

ಸಿಂಹ, ಹುಲಿ ರಕ್ಷಣೆಗೆ ದೇಶಗಳ ಒಕ್ಕೂಟ: ಸಂಪುಟ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಒಕ್ಕೂಟದಿಂದ ಏಕರೂಪದ ಸಂರಕ್ಷಣಾ ಯೋಜನೆ ರೂಪಿಸಲಾಗುತ್ತಿದ್ದು, ಈ ಸಂಸ್ಥೆಯ ಸ್ಥಾಪನೆ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರ ಪ್ರಸ್ತುತ ಆಯವ್ಯಯದಲ್ಲಿ 150 ಕೋಟಿ ರು. ತೆಗೆದಿರಿಸಿದೆ.

ನವದೆಹಲಿ: ಚಿರತೆ, ಹುಲಿ, ಸಿಂಹವೂ ಸೇರಿದಂತೆ ಬೆಕ್ಕಿನ ಪ್ರಭೇದದ ದೈತ್ಯ ಪ್ರಾಣಿಗಳ ಸಂರಕ್ಷಣೆಯ ಧ್ಯೇಯದೊಂದಿಗೆ ಸ್ಥಾಪಿಸಲು ಉದ್ದೇಶಿಸಲಾಗಿರುವ ಅಂತಾರಾಷ್ಟ್ರೀಯ ದೈತ್ಯ ಬೆಕ್ಕು ಪ್ರಭೇದಗಳ ಒಕ್ಕೂಟ (ಐಬಿಸಿಎ) ರಚನೆಗೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಒಕ್ಕೂಟದ ಕೇಂದ್ರ ಕಚೇರಿಯು ಭಾರತದಲ್ಲಿ ಇರಲಿದ್ದು, ಬೆಕ್ಕಿನ ಪ್ರಭೇದಕ್ಕೆ ಸೇರಿದ ಬೃಹತ್‌ ಪ್ರಾಣಿಗಳು ಇರುವ 96 ರಾಷ್ಟ್ರಗಳು ಈ ಒಕ್ಕೂಟ ಸೇರುವ ಮೂಲಕ ಅವುಗಳ ಸಂರಕ್ಷಣೆ ಮಾಡಲು ಏಕರೂಪದ ಯೋಜನೆ ರೂಪಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಒಕ್ಕೂಟಕ್ಕಾಗಿಯೇ ಐದು ವರ್ಷಗಳ ಅವಧಿಗೆ ಆಯವ್ಯಯದಲ್ಲಿ ಸುಮಾರು 150 ಕೋಟಿ ರು. ಹಣವನ್ನು ತೆಗೆದಿರಿಸಿದೆ. ಈ ಒಕ್ಕೂಟದಲ್ಲಿ ಬೆಕ್ಕಿನ ಪ್ರಭೇದಕ್ಕೆ ಸೇರಿದ ಹುಲಿ, ಚಿರತೆ, ಸಿಂಹ, ಪೂಮಾ, ಜಾಗ್ವಾರ್‌, ಚೀತಾ ಮತ್ತು ಹಿಮಚಿರತೆಗಳನ್ನು ಪರಸ್ಪರ ಸೌಹಾರ್ದದ ಮೂಲಕ ರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದೆ.