ಸಾರಾಂಶ
ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್‌ನ ಖಾತೆಗಳಿಗೆ ಐಎಂಪಿಎಸ್ ವಿಧಾನದಡಿ 820 ಕೋಟಿ ರು. ಜಮೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ರಾಜಸ್ಥಾನ ಹಾಗೂ ಮಹಾರಾಷ್ಟ್ರದ 67 ಕಡೆ ದಾಳಿ ನಡೆಸಿದೆ.
ಪಿಟಿಐ ನವದೆಹಲಿ
ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್‌ನ ಖಾತೆಗಳಿಗೆ ಐಎಂಪಿಎಸ್ ವಿಧಾನದಡಿ 820 ಕೋಟಿ ರು. ಜಮೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ರಾಜಸ್ಥಾನ ಹಾಗೂ ಮಹಾರಾಷ್ಟ್ರದ 67 ಕಡೆ ದಾಳಿ ನಡೆಸಿದೆ. ಇದು ಈ ಹಗರಣಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ 2ನೇ ಸುತ್ತಿನ ದಾಳಿಯಾಗಿದೆ. ಮೊದಲ ಸುತ್ತಿನಲ್ಲಿ ಕರ್ನಾಟಕದ ಮಂಗಳೂರಿನಲ್ಲೂ ಪರಿಶೀಲನೆ ನಡೆಸಲಾಗಿತ್ತು ಎಂಬುದು ಗಮನಾರ್ಹ.2023ರ ನ.10, 13ರಂದು ಯುಕೋ ಬ್ಯಾಂಕ್‌ನ 41 ಸಾವಿರ ಖಾತೆಗಳಿಗೆ 7 ಖಾಸಗಿ ಬ್ಯಾಂಕುಗಳ 14600 ಖಾತೆಗಳಿಂದ 820 ಕೋಟಿ ರು. ಹಣ ಐಎಂಪಿಎಸ್ ಮೂಲಕ ವರ್ಗವಾಗಿತ್ತು. ಆದರೆ ಆ ಖಾಸಗಿ ಬ್ಯಾಂಕ್‌ಗಳ ಖಾತೆಗಳಿಂದ ಹಣ ಕಡಿತವಾಗಿರಲಿಲ್ಲ. ಈ ರೀತಿ ಪುಗಸಟ್ಟೆಯಾಗಿ ಬಂದ ಹಣವನ್ನು ಬ್ಯಾಂಕಿಗೆ ಮರಳಿಸದೆ ಖಾತೆಯಿಂದ ತೆಗೆದಿರುವ ಗ್ರಾಹಕರನ್ನೇ ಗುರಿಯಾಗಿಸಿ 2ನೇ ಸುತ್ತಿನಲ್ಲಿ ಸಿಬಿಐ ದಾಳಿ ನಡೆಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
2023ರ ಡಿಸೆಂಬರ್‌ನಲ್ಲಿ ನಡೆದ ಮೊದಲ ಸುತ್ತಿನ ದಾಳಿಯಲ್ಲಿ ಕೋಲ್ಕತಾ, ಮಂಗಳೂರಿನ 13 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.