ಸಾರಾಂಶ
ಕೋಲ್ಕತಾ: ಕಳೆದ ವಾರ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಬುಧವಾರ ಆರಂಭಿಸಿದೆ. ಕಾಲೇಜಿಗೆ ವಿಧಿವಿಜ್ಞಾನ ತಂಡ, ಬೆರಳಚ್ಚು ತಜ್ಞರೊಂದಿಗೆ ಆಗಮಿಸಿರುವ ಅದು ಆರೋಪಿಗಳ ಉಪಸ್ಥಿತಿ ಬಗ್ಗೆ ಎಲ್ಲ ಸಾಕ್ಷ್ಯ ಸಂಗ್ರಹಿಸಿದೆ. ಇದೇ ವೇಳೆ ಕೋಲ್ಕತಾ ಪೊಲೀಸರಿಂದ ಬಂಧನಕ್ಕೆ ಒಳಗಾದ ಆರೋಪಿ ಸಂಜಯ ರಾಯ್‌ನನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.ಸಿಬಿಐ ಪ್ರಕರಣ ಭೇದಿಸಲು 3 ತಂಡಗಳನ್ನು ರಚಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಕೇಸು ದಾಖಲಿಸಿಕೊಂದು ತೀವ್ರಗತಿಯಲ್ಲಿ ತನಿಖೆ ಆರಂಭಿಸಿದೆ.
6 ವಿಷಯದ ಬಗ್ಗೆ ಸಿಬಿಐ ಗಮನ:
ಸಿಬಿಐ ತನಿಖೆಯು ಸಾಕ್ಷ್ಯ ನಾಶ ಸೇರಿದಂತೆ 6 ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ. ಅವು: ಎ) ವೈದ್ಯರ ಮೇಲೆ ಒಬ್ಬ ವ್ಯಕ್ತಿ ಅಥವಾ ಅನೇಕರು ಅತ್ಯಾಚಾರವೆಸಗಿದ್ದಾರಾ? ಬಿ) ಬಂಧಿತ ಆರೋಪಿ ಸಂಜಯ್ ರಾಯ್ ಒಬ್ಬನೇ ಭಾಗಿ ಆಗಿದ್ದನೆ? ಸಿ) ಘಟನೆಯ ನಂತರ ಸಾಕ್ಷ್ಯ ನಾಶವಾಗಿದೆಯೇ ಡಿ) ಏಕೆ ಕೊಲೆಯನ್ನು ಮೊದಲು ಆತ್ಮಹತ್ಯೆ ತಿಳಿಸಲಾಗಿತ್ತು? ಡಿ) ಆಸ್ಪತ್ರೆಯ ಆಡಳಿತವು ಕೃತ್ಯದಲ್ಲಿ ಭಾಗಿಯಾಗಿದೆಯೇ ಮತ್ತು ಎಫ್) ವೈದ್ಯರನ್ನು ರಾತ್ರಿಯೇ ಕೊಲೆ ಮಾಡಿದ್ದರೂ ಬೆಳಿಗ್ಗೆ ಏಕೆ ಪೊಲೀಸರಿಗೆ ಮಾಹಿತಿ ನೀಡಲಾಯಿತು?
ಪುರಾವೆ ಸಂಗ್ರಹ:
ಈ ನಡುವೆ, ಅಪರಾಧದ ಸಮಯದಲ್ಲಿ ಸ್ಥಳದಲ್ಲಿದ್ದವರನ್ನು ಗುರುತಿಸಲು ತಂಡವು ಮೊಬೈಲ್ ಫೋನ್ ಡೇಟಾವನ್ನು ವಿಶ್ಲೇಷಿಸುತ್ತದೆ, ರಾಜ್ಯ ಪೊಲೀಸ್ ಪಡೆ ಸಂಗ್ರಹಿಸಿದ ಪುರಾವೆಗಳನ್ನು ಪರಿಶೀಲಿಸುತ್ತದೆ ಮತ್ತು ಸಂಜಯ ರಾಯ್ ಅವರ ಹೇಳಿಕೆಯನ್ನು ಮರು-ರೆಕಾರ್ಡ್ ಮಾಡುತ್ತದೆ. ಆಸ್ಪತ್ರೆಯ ವೈದ್ಯರ ಹೇಳಿಕೆ ದಾಖಲಿಸಿಕೊಂಡು ಎಲ್ಲ ಸಿಸಿಟೀವಿ ದೃಶ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.