ಸಾರಾಂಶ
ಮತ ಎಣಿಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆಯುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗ, ಯಾರು? ಯಾರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮತ ಎಣಿಕೆಗೂ ಮುನ್ನ ನಮಗೆ ಸಾಕ್ಷ್ಯ ನೀಡಿ. ನಾವು ಅವರ ಮೇಲೆ ಕ್ರಮ ಕೈಗೊಳ್ಳುತ್ತೀವಿ ಎಂದು ಸವಾಲು ಹಾಕಿದೆ.
ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆಯುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗ, ಯಾರು? ಯಾರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮತ ಎಣಿಕೆಗೂ ಮುನ್ನ ನಮಗೆ ಸಾಕ್ಷ್ಯ ನೀಡಿ. ನಾವು ಅವರ ಮೇಲೆ ಕ್ರಮ ಕೈಗೊಳ್ಳುತ್ತೀವಿ ಎಂದು ಸವಾಲು ಹಾಕಿದೆ.
ಚುನಾವಣೆ ವೇಳೆ ಮತ್ತು ಚುನಾವಣೇತರ ಸಮಯದಲ್ಲಿ ರಾಜಕೀಯ ಪಕ್ಷಗಳು ಮಾಡುವ ಆರೋಪಕ್ಕೆ ಸ್ಪಷ್ಟನೆ ರೂಪದಲ್ಲೇ ಉತ್ತರ ನೀಡುವ ಕೇಂದ್ರ ಚುನಾವಣಾ ಅಯೋಗ ಅಪರೂಪಕ್ಕೆ ಎಂಬಂತೆ ವಿಪಕ್ಷಗಳ ಮೇಲೆ ಕೆಂಡಾಮಂಡಲವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭಾ ಚುನಾವಣೆಯ ರಿಟರ್ನಿಂಗ್ ಆಫೀಸರ್‌ಗಳಾಗಿರುವ 150ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಈ ಮೂಲಕ ಮತ ಎಣಿಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಯತ್ನ ಮಾಡಿದ್ದಾರೆ. ಇದು ಪಾರದರ್ಶಕ ಮತ ಎಣಿಕೆ ಪ್ರಕ್ರಿಯೆ ಮೇಲೆ ಅನುಮಾನದ ಕಾರ್ಮೋಡ ಮೂಡುವಂತೆ ಮಾಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಭಾನುವಾರ ಆರೋಪ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಎಸ್.ಎಸ್.ಸಂಧು ಅವರೊಡಗೂಡಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ‘ಯಾವುದೇ ವಿದೇಶಿ ಶಕ್ತಿಗಳು ಚುನಾವಣೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರದಂತೆ ನಾವು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಆದರೆ ಇದೀಗ ದೇಶದೊಳಗಿನಿಂದಲೇ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿಗಳು ಮತ್ತು ರಿಟರ್ನಿಂಗ್ ಆಫೀಸರ್‌ಗಳ ಮೆಲೆ ಪ್ರಭಾವ ಬೀರುವ ಮೂಲಕ ಮತ ಎಣಿಕೆ ಅಡ್ಡದಾರಿ ಹಿಡಿಯುವಂತೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದೆ.
ಹೀಗಾಗಿ ಯಾರು? ಯಾರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ವಿಪಕ್ಷಗಳು ನಮಗೆ ಮತ ಎಣಿಕೆ ಪ್ರಕ್ರಿಯೆಗೂ ಮುನ್ನ ಸಾಕ್ಷ್ಯ ನೀಡಬೇಕು. ನಾವು ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಅದು ಬಿಟ್ಟು ನೀವು ಸುಮ್ಮನೆ ವದಂತಿ ಹಬ್ಬಿಸಿ, ಎಲ್ಲರನ್ನೂ ಅನುಮಾನದ ವ್ಯಾಪ್ತಿಯಲ್ಲಿ ಇರಿಸಲಾಗದು’ ಎಂದು ನೇರವಾಗಿ ವಿಪಕ್ಷಗಳಿಗೆ ಸವಾಲು ಹಾಕಿದರು.
ಇದೇ ವೇಳೆ ವಿಪಕ್ಷಗಳ ನಾಯಕರ ನಿಯೋಗ ಭಾನುವಾರ ಆಯೋಗಕ್ಕೆ ಮತ ಎಣಿಕೆ ವಿಧಾನ ಕುರಿತು ಹಲವು ಮನವಿ ಸಲ್ಲಿಸಿವೆ. ಆದರೆ ಇವೆಲ್ಲವೂ ಕಳೆದ 70 ವರ್ಷಗಳಿಂದ ಚಾಲ್ತಿಯಲ್ಲಿರುವ ಪ್ರಕ್ರಿಯೆ. ನಿಯಮಾವಳಿಯಲ್ಲಿರುವ ರೀತಿಯಲ್ಲೇ ಮತ ಎಣಿಕೆ ಪ್ರಕ್ರಿಯೆ ನಡೆಯಬೇಕು ಎಂದು ಈಗಾಗಲೇ ಎಲ್ಲಾ ರಿಟರ್ನಿಂಗ್ ಆಫೀಸರ್‌ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ರಾಜೀವ್ ಕುಮಾರ್ ಹೇಳಿದರು.