ಸಾರಾಂಶ
ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗಲು ಆಹ್ವಾನ ಸ್ವೀಕರಿಸಿರುವ ಭಾರತೀಯ ಚಿತ್ರರಂಗದ ಹಲವಾರು ನಟ, ನಟಿಯರು ಅಯೋಧ್ಯೆಯತ್ತ ಧಾವಿಸುತ್ತಿದ್ದಾರೆ.
ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗಲು ಆಹ್ವಾನ ಸ್ವೀಕರಿಸಿರುವ ಭಾರತೀಯ ಚಿತ್ರರಂಗದ ಹಲವಾರು ನಟ, ನಟಿಯರು ಅಯೋಧ್ಯೆಯತ್ತ ಧಾವಿಸುತ್ತಿದ್ದಾರೆ.
ಹಲವರು ಮಂದಿರ ಉದ್ಘಾಟನೆ ದಿನವಾದ ಸೋಮವಾರದಂದೇ ತಮ್ಮ ಖಾಸಗಿ ಜೆಟ್ ವಿಮಾನಗಳಲ್ಲಿ ಆಗಮಿಸುತ್ತಿದ್ದರೆ, ಇನ್ನೂ ಹಲವರು ಭಾನುವಾರದಂದೇ ಅಯೋಧ್ಯೆಗೆ ಬಂದು ವಾಸ್ತವ್ಯ ಹೂಡಿದ್ದಾರೆ.
ಈಗಾಗಲೇ ನಟ ರಜನೀಕಾಂತ್, ಪವನ್ ಕಲ್ಯಾಣ್, ರಣದೀಪ್ ಹೂಡಾ, ಸಂಗೀತ ಸಂಯೋಜಕ ಶಂಕರ್ ಮಹದೇವನ್ ಮತ್ತು ನಟಿ ಕಂಗನಾ ರಣಾವತ್ ಹಾಗೂ ಶೆಫಾಲಿ ಶಾ ಸೇರಿ ಹಲವರು ಅಯೋಧ್ಯೆ ಹಾಗೂ ಸುತ್ತಮುತ್ತಲ ನಗರಗಳಿಗೆ ಆಗಮಿಸಿದ್ದಾರೆ. ಇನ್ನು ನಟ ಅಮಿತಾಭ್ ಬಚ್ಚನ್ ಖಾಸಗಿ ಜೆಟ್‌ನಲ್ಲಿ ಸೋಮವಾರ ಮುಂಜಾನೆ ಅಯೋಧ್ಯೆಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿ, ವಿಪಕ್ಷ ನಾಯಕ, ಪ್ರಮುಖ ರಾಜಕೀಯ ಪಕ್ಷಗಳ ಮುಖ್ಯಸ್ಥರು, ರಾಜ್ಯಪಾಲರು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ನಟರು ಮತ್ತು ಕಲಾವಿದರು ಸೇರಿದಂತೆ ಒಟ್ಟು 8,000 ಜನ ಪ್ರಮುಖರಿಗೆ ಅಯೋಧ್ಯೆ ಮಂದಿರದ ವಿಶೇಷ ಆಹ್ವಾನ ನೀಡಲಾಗಿದೆ.
ರಾಮ ಪ್ರತಿಷ್ಠಾಪನೆ ವೇಳೆ ಮೊಳಗಲಿದೆ ಮಂಗಳ ಧ್ವನಿ
ಅಯೋಧ್ಯೆ ರಾಮ ಮಂದಿರದಲ್ಲಿ ಸೋಮವಾರ ಪ್ರಾಣಪ್ರತಿಷ್ಠಾಪನೆ ವೇಳೆ ಮಂತ್ರಘೋಷಗಳ ಜತೆಗೆ ಮಂಗಳ ಧ್ವನಿಯೂ ಮೊಳಗಲಿದೆ. ಪ್ರಾಣಪ್ರತಿಷ್ಠಾಪನೆಗೂ 2 ತಾಸು ಮುನ್ನ.
ಕರ್ನಾಟಕದ ವೀಣೆ ಸೇರಿ ದೇಶದ ವಿವಿಧ ಭಾಗಗಳ 50 ಸಾಂಪ್ರದಾಯಿಕ ಮಂಗಳ ವಾದ್ಯಗಳನ್ನು ಬಳಸಿ ಮಂಗಳ ಧ್ವನಿಯನ್ನು ಮೊಳಗಿಸಲಾಗುತ್ತದೆ.ಅಯೋಧ್ಯೆಯ ಖ್ಯಾತ ಕವಿ ಯತೀಂದ್ರ ಮಿಶ್ರಾ ಅವರಿಂದ ಮಂಗಳವಾದ್ಯ ಗೋಷ್ಠಿ ಆಯೋಜಿಸಲ್ಪಟ್ಟಿದೆ. ಸಂಗೀತ ನಾಟಕ ಅಕಾಡೆಮಿಯು ಈ ಪ್ರಯತ್ನವನ್ನು ಬೆಂಬಲಿಸಿದೆ.
ಸಂಗೀತ ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭವಾಗಲಿದೆ.
ವಾದ್ಯಗಳಲ್ಲಿ ಉತ್ತರ ಪ್ರದೇಶದ ಪಖಾವಾಜ್, ಕೊಳಲು ಮತ್ತು ಢೋಲಕ್ ಸೇರಿವೆ; ಕರ್ನಾಟಕದ ವೀಣೆ, ಪಂಜಾಬಿನಿಂದ ಅಲ್ಗೋಜಾ, ಮಹಾರಾಷ್ಟ್ರದಿಂದ ಸುಂದರಿ; ಒಡಿಶಾದಿಂದ ಮರ್ದಲ, ಮಧ್ಯಪ್ರದೇಶದಿಂದ ಸಂತೂರ್, ಮಣಿಪುರದಿಂದ ಪುಂಗ್, ಅಸ್ಸಾಂನಿಂದ ನಗಾಡಾ ಮತ್ತು ಕಾಳಿ ಹಾಗೂ ಛತ್ತೀಸ್‌ಗಢದಿಂದ ತಂಬೂರಾ ಇವೆ.
ದೆಹಲಿಯಿಂದ ಶೆಹನಾಯಿ, ರಾಜಸ್ಥಾನದಿಂದ ರಾವಣಹತ, ಪಶ್ಚಿಮ ಬಂಗಾಳದಿಂದ ಶ್ರೀಖೋಲ್ ಮತ್ತು ಸರೋದ್, ಆಂಧ್ರಪ್ರದೇಶದಿಂದ ಘಟಂ, ಜಾರ್ಖಂಡ್‌ನಿಂದ ಸಿತಾರ್, ಗುಜರಾತ್‌ನಿಂದ ಸಾಂತರ್, ಬಿಹಾರದಿಂದ ಪಖಾವಾಜ್, ಉತ್ತರಾಖಂಡದಿಂದ ಹುಡ್ಕ ಮತ್ತು ತಮಿಳುನಾಡಿನಿಂದ ನಾಗಸ್ವರಂ, ತವಿಲ್ ಮತ್ತು ಮೃದಂಗ ಸಹ ಇರುತ್ತದೆ.
‘ಭಕ್ತಿಯಲ್ಲಿ ಮುಳುಗಿರುವ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಡೆಯುವ ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಬೆಳಿಗ್ಗೆ 10 ಗಂಟೆಗೆ ಭವ್ಯವಾದ ‘ಮಂಗಳಧ್ವನಿ’ಯಿಂದ ಅಲಂಕರಿಸಲ್ಪಡುತ್ತದೆ.
ವಿವಿಧ ರಾಜ್ಯಗಳಿಂದ ಸುಮಾರು 50 ಕ್ಕೂ ಹೆಚ್ಚು ಸೊಗಸಾದ ವಾದ್ಯಗಳು ಈ ಮಂಗಳಕರ ಸಂದರ್ಭದಲ್ಲಿ ಒಂದಾಗಲಿವೆ. ಸುಮಾರು 2 ಗಂಟೆಗಳ ಕಾಲ ಪ್ರತಿಧ್ವನಿಸುತ್ತವೆ’ ಎಂದು ದೇವಸ್ಥಾನದ ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದರು.
ಮಂದಿರ ನಿರ್ಮಾಣಕ್ಕೆ ಈವರೆಗೆ 1,100 ಕೋಟಿ ರು. ವೆಚ್ಚ
ಅಯೊಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 1,100 ಕೋಟಿ ರು. ವೆಚ್ಚ ಮಾಡಲಾಗಿದೆ. ಬಾಕಿ ಕಾಮಗಾರಿಗೆ ಇನ್ನೂ 300 ಕೋಟಿ ರು. ಖರ್ಚಾಗುವ ಅಂದಾಜು ಇದೆ ಎಂದು ಶ್ರೀರಾಮ ಮಂದಿರ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಮಾಹಿತಿ ನೀಡಿದ್ದಾರೆ.
2020 ಫೆಬ್ರವರಿಯಿಂದ 2021 ಫೆಬ್ರವರಿ ಅವಧಿಯಲ್ಲಿ ಒಟ್ಟು 3,000 ಕೋಟಿ ರು. ದೇಣಿಗೆ ಹರಿದು ಬಂದಿದ್ದಾಗಿ ಟ್ರಸ್ಟ್ ಈ ಹಿಂದೆ ತಿಳಿಸಿತ್ತು.
70 ದೇಶಗಳಲ್ಲಿ ಮಂದಿರ ಪ್ರತಿಷ್ಠಾಪನೆ ಸಂಭ್ರಮ
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಸುದಿನಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಈ ಹಬ್ಬಕ್ಕಾಗಿ ಐದು ಶತಕಗಳಿಂದ ಕಾದಿದ್ದ ಭಕ್ತರು ಇದೀಗ ವಿಶ್ವದಾದ್ಯಂತ ಆಚರಿಸಲು ತಯಾರಿ ನಡೆಸಿದ್ದಾರೆ.
ಸುಮಾರು 70ಕ್ಕೂ ಹೆಚ್ಚು ದೇಶಗಳಲ್ಲಿ ರಾಮಭಕ್ತರು ಹಬ್ಬದ ಸಡಗರವನ್ನು ಆಚರಿಸಲಿದ್ದಾರೆ. ಅಮೆರಿಕ, ಫ್ರಾನ್ಸ್, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಯುಎಇ, ಧಾಯ್ಲೆಂಡ್ ಸೇರಿ ಹಲವು ದೇಶಗಳಲ್ಲಿ ರಾಮ ಭಕ್ತರು ವಿಶೇಷ ಪೂಜಾ ಕೈಂಕರ್ಯ ನಡೆಸಲಿದ್ದಾರೆ.
ಇದರ ಜೊತೆಗೆ ಪ್ರಸಾದ ವಿತರಣೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.