ಸಾರಾಂಶ
ನವದೆಹಲಿ : ಪ್ರತಿ 10 ವರ್ಷಕ್ಕೊಮ್ಮೆ ನಡೆಯಬೇಕಿರುವ ಹಾಗೂ ಕೋವಿಡ್ ಕಾರಣ ಮೂರು ವರ್ಷಗಳ ಹಿಂದೆ ಮುಂದೂಡಿಕೆ ಕಂಡಿದ್ದ ಜನಗಣತಿಯನ್ನು ನಡೆಸಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ. ಆದರೆ ರಾಜಕೀಯವಾಗಿ ಪ್ರಬಲ ಬೇಡಿಕೆ ವ್ಯಕ್ತವಾಗಿರುವ ಜಾತಿ ಜನಗಣತಿಯನ್ನೂ ಇದೇ ವೇಳೆ ನಡೆಸಲಾಗುತ್ತದೆಯೇ ಎಂಬ ವಿಷಯ ಇನ್ನೂ ನಿರ್ಧಾರವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಗಣತಿಯನ್ನು ಶೀಘ್ರದಲ್ಲೇ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
1881ರಿಂದ ದೇಶದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತಿದೆ. 2020ರ ಏ.1ರಿಂದ ಜನಗಣತಿ ಆರಂಭವಾಗಬೇಕಿತ್ತಾದರೂ ಕೋವಿಡ್ ಕಾರಣ ಮುಂದೂಡಲಾಗಿತ್ತು. ಕಳೆದ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಮಹಿಳಾ ಮೀಸಲು ಮಸೂದೆ ಜಾರಿಗೆ ಬರಲು ಜನಗಣತಿಯಲ್ಲಿನ ಅಂಕಿ-ಅಂಶಗಳು ಅತ್ಯಗತ್ಯವಾಗಿವೆ.
==
‘ಒಂದು ದೇಶ ಒಂದು ಚುನಾವಣೆ’ ಮಸೂದೆ ಶೀಘ್ರ
ನವದೆಹಲಿ: ದೇಶಾದ್ಯಂತ ಪಂಚಾಯ್ತಿಯಿಂದ ಹಿಡಿದು ಸಂಸತ್ತಿನವರೆಗೆ ಒಂದೇ ಕಾಲಕ್ಕೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ‘ಒಂದು ದೇಶ-ಒಂದು ಚುನಾವಣೆ’ ಮಸೂದೆಯನ್ನು ಶೀಘ್ರದಲ್ಲೇ ಮಂಡಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಬಹುಶಃ ಮೋದಿ ಸರ್ಕಾರ ತನ್ನ ಈ 3ನೇ ಅವಧಿ ಮುಗಿವುದರೊಳಗೆ ಇದರ ಅಂಗೀಕಾರಕ್ಕೆ ಯತ್ನ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.