ಸಾರಾಂಶ
ನವದೆಹಲಿ: 4 ವರ್ಷಗಳಷ್ಟು ಅಲ್ಪಾವಧಿಗೆ ಯುವಕರನ್ನು ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ ಯೋಜನೆಯಲ್ಲಿ ಭಾರಿ ಬದಲಾವಣೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗಿದೆ. 4 ವರ್ಷಗಳ ಸೇವಾವಧಿ ಮುಗಿದ ಬಳಿಕ ಈಗ ಶೇ.25ರಷ್ಟು ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಉಳಿಸಿಕೊಂಡು, ಉಳಿದವರನ್ನು ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಮುಂದೆ ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವ ಸಂಭವವಿದೆ. ಜತೆಗೆ ವೇತನ, ಭತ್ಯೆಯಲ್ಲೂ ಬದಲಾವಣೆ ತರುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ.
ಸೇನಾಪಡೆಗಳು ತಮ್ಮ ವಿವಿಧ ಘಟಕಗಳಿಂದ ಅಗ್ನಿಪಥ ಯೋಜನೆ ಕುರಿತು ಅಭಿಪ್ರಾಯ ಸ್ವೀಕರಿಸಿದೆ. ಜತೆಗೆ ಆಂತರಿಕ ಸಮೀಕ್ಷೆ ನಡೆಸಿದೆ. ಆ ಪ್ರಕಾರ, ಶೇ.25ರಷ್ಟು ಅಗ್ನಿವೀರರನ್ನು ಮಾತ್ರವೇ ಸೇವೆಯಲ್ಲಿ ಉಳಿಸಿಕೊಳ್ಳುವುದು ತೀರಾ ಕಡಿಮೆಯಾಗುತ್ತದೆ. ಇದರಿಂದ ನಿರೀಕ್ಷಿತ ಯುದ್ಧ ಸನ್ನದ್ಧತೆಯನ್ನು ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಳ ಮಾಡಬೇಕು ಎಂದು ಸೇನಾಪಡೆಗಳು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಶಿಫಾರಸು ಮಾಡಿವೆ ಎನ್ನಲಾಗಿದೆ. ಇದು ಜಾರಿಗೆ ಬರಲು ಒಂದಷ್ಟು ಸಮಯ ಬೇಕಾಗುತ್ತದೆ ಎಂದು ವರದಿಗಳು ತಿಳಿಸಿವೆ.
ವಿಪಕ್ಷದ ವಿರೋಧಕ್ಕೆ ಮಣಿದ ಸರ್ಕಾರ?:
ಸೇನಾಪಡೆಗಳಿಗೆ ಅಲ್ಪಾವಧಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳುವ ಈ ಯೋಜನೆ ಬಗ್ಗೆ ಪ್ರತಿಪಕ್ಷಗಳು ನಿರಂತರ ಟೀಕಾ ಪ್ರಹಾರ ನಡೆಸುತ್ತಿವೆ. ಈ ಯೋಜನೆಯಿಂದಾಗಿ, ಹೆಚ್ಚು ಯುವಕರು ಸೇನೆಗೆ ಸೇರುವ ದೇಶದ ವಿವಿಧ ಭಾಗಗಳಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಹಿನ್ನಡೆ ಆಗಿದೆ ಎಂಬ ವಿಶ್ಲೇಷಣೆಗಳಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಜನೆಯ ಪರಿಷ್ಕರಣೆಗೆ ಮುಂದಾಗಿರುವುದು ಗಮನಾರ್ಹ.
ಕಾಂಗ್ರೆಸ್ ಆಕ್ಷೇಪ:
ಈ ನಡುವೆ, ಯೋಜನೆಯಲ್ಲಿ ಬದಲಾವಣೆಯನ್ನು ನಾವು ಒಪಲ್ಲ. ಇಡೀ ಅಗ್ನಿವೀರ ಯೋಜನೆಯನ್ನೇ ರದ್ದು ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.