ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಗುರುವಾರ ರೈತರ ಆದಾಯವನ್ನು ಸುಧಾರಿಸುವುದು ಮತ್ತು ಮಧ್ಯಮ ವರ್ಗದವರಿಗೆ ಆಹಾರ ಭದ್ರತೆಯನ್ನು ಕಾಪಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
‘ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ’ ಮತ್ತು ‘ಕೃಷೋನ್ನತಿ ಯೋಜನೆ’ ಯೋಜನೆಗಳ ಅನುಷ್ಠಾನಕ್ಕೆ ಅದು ನಿರ್ಧರಿಸಿದ್ದು, ರೈತರ ಆದಾಯ ಹೆಚ್ಚಳ ಮತ್ತು ಆಹಾರ ಭದ್ರತೆಗೆ 1,01,321 ಕೋಟಿ ರು.ಗಳ ಬಜೆಟ್ ಅನ್ನು ನಿಗದಿಪಡಿಸಿದೆ ಮತ್ತು ಈ ಮೇಲಿನ 2 ಪ್ರಮುಖ ಉಪಕ್ರಮಗಳಿಗೆ ಒತ್ತು ನೀಡಿದೆ. ಈ ಉಪಕ್ರಮಗಳು ಕೃಷಿ ಉತ್ಪಾದಕತೆ, ಸಾವಯವ ಕೃಷಿ, ಮಣ್ಣಿನ ಆರೋಗ್ಯ ಮತ್ತು ಸುಧಾರಿತ ಕೃಷಿ ತಂತ್ರಗಳನ್ನು ಒತ್ತಿಹೇಳುತ್ತವೆ. ಇದರಿಂದ ಆಹಾರ ಉತ್ಪಾದನೆ ಹೆಚ್ಚಳ ಆಗಿ ಜನರಿಗೆ ಆಹಾರ ಭದ್ರತೆ ಸಿಗುತ್ತದೆ ಎಂದು ಸಭೆ ಬಳಿಕ ವಾರ್ತಾ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಪಿಎಂ ಕೃಷಿ ವಿಕಾಸ ಯೋಜನೆ:
ಇದರ ಅಡಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ, ಮಳೆಯಾಧಾರಿತ ಪ್ರದೇಶ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣದಂತಹ ವಿವಿಧ ಕ್ರಮಗಳ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಸಾವಯವ ಕೃಷಿ ಹಾಗೂ ತಂತ್ರಜ್ಞಾನ ಅಧರಿತ ಕೃಷಿಗೆ ಆದ್ಯತೆ ನೀಡಿ ರೈತರ ಆದಾಯ ಹೆಚ್ಚಳಕ್ಕೆ ಕ್ರಮ ಜರುಗಿಸಲಾಗುತ್ತದೆ.
ಕೃಷೋನ್ನತಿ ಯೋಜನೆ:
ಕೃಷ್ಣೋನ್ನತಿ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೋಷಣೆ ಮಿಷನ್, ತೋಟಗಾರಿಕೆಗೆ ಆದ್ಯತೆ ನೀಡುತ್ತದೆ. ಇದರಿಂದ ಕೃಷಿ ಉತ್ಪನ್ನ ಹೆಚ್ಚಳ ಮೂಲಕ ಆಹಾರ ಭದ್ರತೆಗೆ ಆದ್ಯತೆ ನೀಡುತ್ತದೆ.
ಖಾದ್ಯತೈಲ ಸ್ವಾವಲಂಬನೆ:
ಖಾದ್ಯತೈಲ ವಲಯದಲ್ಲಿ ಸ್ವಾಲವಂಬನೆ ಸಾಧಿಸಲು ಖಾದ್ಯತೈಲ ರಾಷ್ಟ್ರೀಯ ಮಿಷನ್‌ಗೆ ಅನುಮೋದನೆ ನೀಡಲಾಗಿದೆ. 7 ವರ್ಷದ ಅವಧಿಯಲ್ಲಿ 10,103 ಕೋಟಿ ರು. ನೀಡಲಾಗುತ್ತದೆ. 2022-23ರಲ್ಲಿ ಖಾದ್ಯತೈಲ ಉತ್ಪಾದನೆ 39 ದಶಲಕ್ಷ ಟನ್ ಇತ್ತು. ಅದನ್ನು ಈಗ 69 ಲಕ್ಷ ಟನ್‌ಗೆ ಏರಿಸುವ ಗುರಿ ಹೊಂದಲಾಗಿದೆ.