ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಪಿಎಸ್‌ ಟೋಲ್‌ ಶೀಘ್ರ ನಿರ್ಮಾಣ

| Published : Jan 07 2024, 01:30 AM IST / Updated: Jan 07 2024, 11:28 AM IST

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಪಿಎಸ್‌ ಟೋಲ್‌ ಶೀಘ್ರ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಜಿಪಿಎಸ್‌ ಆಧರಿಸಿ ವಾಹನಗಳಿಗೆ ಸುಂಕ ವಿಧಿಸುವ ವಿಭಿನ್ನ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಮೊದಲಿಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇದನ್ನು ಅಳವಡಿಸಲಾಗುತ್ತದೆ. ಇದರಲ್ಲಿ ವಾಹನ ಎಷ್ಟು ದೂರಕ್ಕೆ ಪ್ರಯಾಣಿಸುತ್ತದೋ ಅಷ್ಟೇ ದೂರಕ್ಕೆ ಸುಂಕ ಕಡಿತವಾಗುತ್ತದೆ.

ನವದೆಹಲಿ: ವಾಹನಗಳು ಚಲಿಸಿದ ದೂರಕ್ಕೆ ಮಾತ್ರ ಟೋಲ್‌ ಶುಲ್ಕ ವಿಧಿಸುವ ಜಿಪಿಎಸ್‌ ಆಧಾರಿತ ಟೋಲ್‌ ವ್ಯವಸ್ಥೆ ದೇಶದಲ್ಲೇ ಮೊದಲು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಹಾಗೂ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಆರಂಭವಾಗುವ ಸಾಧ್ಯತೆಯಿದೆ.

ಈ ಎರಡೂ ರಸ್ತೆಗಳಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ದೆಹಲಿ-ಜೈಪುರ ಹೆದ್ದಾರಿಯಲ್ಲಿ ವಾಹನಗಳು ಎಷ್ಟು ಕಿ.ಮೀ. ಚಲಿಸುತ್ತವೆಯೋ ಅಷ್ಟೇ ದೂರಕ್ಕೆ ಟೋಲ್‌ ಲೆಕ್ಕಾಚಾರ ಮಾಡಲು ಜಿಯೋಫೆನ್ಸಿಂಗ್‌ ಕೆಲಸ ಆರಂಭವಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಜಿಪಿಎಸ್‌ ಮೂಲಕ ಟೋಲ್‌ ಸಂಗ್ರಹಿಸಲು ಈಗಾಗಲೇ 18 ಲಕ್ಷ ವಾಣಿಜ್ಯ ವಾಹನಗಳಿಗೆ ಜಿಪಿಎಸ್‌ ಆಧಾರಿತ ವಾಹನ ಸ್ಥಳ ಪತ್ತೆ ಉಪಕರಣ ಅಳವಡಿಸಲಾಗಿದೆ. ಆರಂಭದಲ್ಲಿ ಈ ವಾಹನಗಳು ಮಾತ್ರ ಜಿಪಿಎಸ್‌ ಟೋಲ್‌ ಪಾವತಿ ಮಾಡಲು ಸಾಧ್ಯವಾಗುತ್ತದೆ. ಜಿಪಿಎಸ್‌ ಟೋಲ್‌ ವ್ಯವಸ್ಥೆಯನ್ನು ಮೊದಲಿಗೆ ದೇಶದ ಬೇರೆ ಬೇರೆ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ, ಬಳಿಕ ಎಲ್ಲಾ ಕಡೆ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.

ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಈ ವರ್ಷದ ಮಾರ್ಚ್‌ನಿಂದ ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ಆರಂಭವಾಗಲಿದೆ ಎಂದು ಲೋಕಸಭೆಯಲ್ಲಿ ಹೇಳಿದ್ದರು. ಶುಕ್ರವಾರ ಕೇಂದ್ರ ರಸ್ತೆ ಸಾರಿಗೆ ಕಾರ್ಯದರ್ಶಿ ಅನುರಾಗ್‌ ಜೈನ್‌ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಜಿಪಿಎಸ್‌ ಆಧಾರಿತ ಟೋಲ್‌ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುತ್ತಿದ್ದು, ಶೀಘ್ರದಲ್ಲೇ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.