ಫಾಸ್ಫೆಟಿಕ್‌ ರಸಗೊಬ್ಬರ ಸಬ್ಸಿಡಿ 8 ರು. ಹೆಚ್ಚಳ

| Published : Mar 01 2024, 02:16 AM IST / Updated: Mar 01 2024, 08:10 AM IST

ಫಾಸ್ಫೆಟಿಕ್‌ ರಸಗೊಬ್ಬರ ಸಬ್ಸಿಡಿ 8 ರು. ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಫಾಸ್ಫೆಟಿಕ್‌ ಸಬ್ಸಿಡಿ ದರ ಕೇಜಿಗೆ 20ರಿಂದ 28 ರು.ಗೆ ಏರಿಕೆ ಮಾಡಲಾಗುವುದು. ಪಿ ಅಂಡ್‌ ಕೆ ರಸಗೊಬ್ಬರಕ್ಕೆ 24420 ಕೋಟಿ ರು. ಸಬ್ಸಿಡಿ ನೀಡಲಾಗುವುದು. 2024ರ ಮುಂಗಾರು ಋತುವಿನಲ್ಲಿ ಈ ಹೆಚ್ಚುವರಿ ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ನವದೆಹಲಿ: ಮುಂಬರುವ ಮುಂಗಾರು ಋತುವಿನಲ್ಲಿ ಫಾಸ್ಫೆಟಿಕ್‌ ಮತ್ತು ಪೊಟ್ಯಾಸಿಕ್‌ (ಪಿ-ಕೆ) ರಸಗೊಬ್ಬರಗಳಿಗೆ 24420 ಕೋಟಿ ರು. ಸಬ್ಸಿಡಿ ನೀಡುವುದಾಗಿ ಹಾಗೂ ಫಾಸ್ಫೆಟಿಕ್‌ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕೇಜಿಗೆ 7.9 ರು. ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. 

ಅಲ್ಲದೇ ಪ್ರಮುಖ ರಸಗೊಬ್ಬರವಾದ ಡಿಎಪಿ ಕ್ವಿಂಟಲ್‌ಗೆ 1350 ರು.ಗಳಿಗೆ ದೊರೆಯುವುದು ಮುಂದುವರಿಯಲಿದೆ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಏ.1ರಿಂದ ಸೆ.30ರವರೆಗೆ ಈ ಸಹಾಯಧನ ಅನ್ವಯವಾಗಲಿದೆ.

ಈ ಕುರಿತಾಗಿ ಪತ್ರಕರ್ತರಿಗೆ ಮಾಹಿತಿ ನೀಡಿದ ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌, ‘ಪಿ-ಕೆ ರಸಗೊಬ್ಬರಗಳ ಮೇಲೆ 24420 ಕೋಟಿ ರು. ಸಬ್ಸಿಡಿ ನೀಡಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 

ಪ್ರತಿ ಕೇಜಿ ಸಾರಜನಕಕ್ಕೆ 47.02 ರು., ಫಾಸ್ಫೆಟಿಕ್‌ ಪ್ರತಿ ಗ್ರಾಂಗೆ 28.72 ರು., ಪೊಟ್ಯಾಸಿಕ್‌ ಪ್ರತಿ ಕೇಜಿಗೆ 2.38 ರು ಮತ್ತು ಗಂಧಕಕ್ಕೆ ಕೇಜಿಗೆ 1.89 ರು. ಸಹಾಯಧನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. 

ಕಳೆದ ವರ್ಷಕ್ಕೆ ಹೋಲಿಸಿದರೆ ಫಾಸ್ಫೆಟಿಕ್‌ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಕೇಜಿಗೆ 20.82 ರು.ನಿಂದ 28.72 ರು.ಗೆ ಹೆಚ್ಚಳ ಮಾಡಲಾಗಿದೆ. ಆದರೆ ಸಾರಜನಕ, ಪೊಟ್ಯಾಸಿಕ್‌ ಮತ್ತು ಗಂಧಕಗಳ ಮೇಲಿನ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

ಅಲ್ಲದೇ ಡಿಎಪಿ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಎನ್‌ಬಿಎಸ್‌ ಯೋಜನೆಯಡಿ 3 ಹೊಸ ರಸಗೊಬ್ಬರ ಶ್ರೇಣಿಗಳನ್ನು ಸೇರಿಸಲು ಸಂಪುಟ ಅನುಮೋದನೆಯನ್ನು ನೀಡಿದೆ.