ಸಾರಾಂಶ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಬಿಎ)ಯು ನೀಟ್-ಪಿಜಿ ಪರೀಕ್ಷೆಯನ್ನು ಮರು ನಿಗದಿ ಪಡಿಸಲು ನಿರ್ಧರಿಸಿದ್ದು, ಸೋಮವಾರ ಅಥವಾ ಮಂಗಳವಾರ ಹೊಸ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ.
ಈ ವರ್ಷ ಪರೀಕ್ಷೆಯಲ್ಲಿ ಭಾರೀ ಬದಲಾವಣೆ ತರುವುದಕ್ಕೆ ಸಂಸ್ಥೆ ಮುಂದಾಗಿದ್ದು ಈ ಹಿಂದಿದ್ದ ಸಾಂಪ್ರದಾಯಿಕ ಪೆನ್ನು-ಪುಸ್ತಕ ಆಧಾರಿತ ಪರೀಕ್ಷಾ ಕ್ರಮವನ್ನು ಕೈ ಬಿಟ್ಟು ಕಂಪ್ಯೂಟರ್ ಆಧಾರಿತ (ಆನ್‌ಲೈನ್) ಪರೀಕ್ಷೆ ನಡೆಸಲು ಚಿಂತನೆ ನಡೆಸುತ್ತಿದೆ.
ನೀಟ್ ಯುಜಿ ವಿವಾದದ ನಡುವೆಯೇ ನೀಟ್ ಪಿಜಿ ಪರೀಕ್ಷೆಯನ್ನು ಇತ್ತೀಚೆಗೆ ಕೊನೇ ಕ್ಷಣದಲ್ಲಿ ಮುಂದೂಡಲಾಗಿತ್ತು. ಅಕ್ರಮ ನಡೆಯಬಹುದು ಎಂಬ ಸುಳಿವು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
ನೀಟ್ ಅಕ್ರಮ: ಗೋಧ್ರಾ ಖಾಸಗಿ ಶಾಲೆ ಒಡೆಯನ ಬಂಧನ
ಗೋದ್ರಾ: ನೀಟ್-ಯುಜಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಸಿಬಿಐ., ಗುಜರಾತ್‌ನ ಗೋಧ್ರಾ ಪಟ್ಟಣದ ಖಾಸಗಿ ಶಾಲೆಯೊಂದರ ಮಾಲಿಕನನ್ನು ಬಂಧಿಸಿದ್ದಾರೆ. ದೀಕ್ಷಿತ್ ಪಟೇಲ್ ಒಡೆತನದ ಜಯ್ ಜಲರಾಮ್ ಶಾಲೆಯಲ್ಲಿ ಮೇ 5ರಂದು ನೀಟ್ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಒದಗಿಸಲು ಅಭ್ಯರ್ಥಿಗಳಿಂದ ₹10 ಲಕ್ಷ ಬೇಡಿಕೆಯಿಟ್ಟ ಆರೋಪದಲ್ಲಿ ಪಟೇಲ್‌ರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾದವರ 6ನೇ ವ್ಯಕ್ತಿ ಈತ. ಗುಜರಾತ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿರುವುದರಿಂದ ಸಿಬಿಐ ತಂಡ ಅವರನ್ನು ಅಹಮದಾಬಾದಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಿದೆ ಎಂದು ಸರ್ಕಾರಿ ವಕೀಲ ರಾಕೇಶ್ ಠಾಕೋರ್ ಹೇಳಿದ್ದಾರೆ.