ಕೇರಳದ ಸಂಭವನೀಯ ಪ್ರಾಕೃತಿಕ ವಿಪತ್ತಿನ ಜು.23ರಂದೇ ಎಚ್ಚರಿಸಿದ್ದೆವು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

| Published : Aug 01 2024, 12:17 AM IST / Updated: Aug 01 2024, 10:07 AM IST

ಸಾರಾಂಶ

‘ಕೇರಳದ ವಯನಾಡಿನಲ್ಲಿ ಸಂಭವನೀಯ ಪ್ರಾಕೃತಿಕ ವಿಪತ್ತಿನ ಬಗ್ಗೆ ಜು.23ರಂದೇ ಕೇಂದ್ರ ಸರ್ಕಾರದಿಂದ ಎಚ್ಚರಿಕೆ ನೀಡಿದ್ದೆವು. ಆದರೂ ಕೇರಳ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

 ನವದೆಹಲಿ : ‘ಕೇರಳದ ವಯನಾಡಿನಲ್ಲಿ ಸಂಭವನೀಯ ಪ್ರಾಕೃತಿಕ ವಿಪತ್ತಿನ ಬಗ್ಗೆ ಜು.23ರಂದೇ ಕೇಂದ್ರ ಸರ್ಕಾರದಿಂದ ಎಚ್ಚರಿಕೆ ನೀಡಿದ್ದೆವು. ಆದರೂ ಕೇರಳ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೈಸರ್ಗಿಕ ವಿಪತ್ತು ಬಂದೆರಗಬಹುದು ಎಂದು ಜು.23ರಂದೇ ಎಚ್ಚರಿಕೆ ನೀಡಿದ್ದೆವು. ಅದೇ ದಿನ ಒಂಭತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್‌) ತಂಡಗಳನ್ನೂ ರಾಜ್ಯಕ್ಕೆ ರವಾನಿಸಿದ್ದೆವು. ಜು.24, ಜು.25 ಹಾಗೂ ಜು.26ರಂದೂ ಎಚ್ಚರಿಕೆ ನೀಡಿ 20 ಸೆಂ.ಮೀ. ವರೆಗೀ ಮಳೆ ಆಗಬಹುದು. ಭೂಕುಸಿತ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದೆವು. ಅದನ್ನು ನೋಡಿಯೂ ಕೇರಳದ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಈ ಹಿಂದೆಯೂ ಈ ರೀತಿ ಅನೇಕ ಸಲ ಮುನ್ನೆಚ್ಚರಿಕೆ ನೀಡಿದೆ. ಗುಜರಾತ್‌ ಹಾಗೂ ಒಡಿಶಾದಲ್ಲಿ ಚಂಡಮಾರುತ ಸಂಭವಿಸಿದಾಗ ಮುನ್ಸೂಚನೆಯನ್ನು ರಾಜ್ಯ ಸರ್ಕಾರಗಳು ಪಾಲಿಸಿದವು. ಹೀಗಾಗಿ ಸಾವಿರಾರು ಜನರ ಪ್ರಾಣರಕ್ಷಣೆ ಆಯಿತು. ಆದರೆ ಕೆಲವು ರಾಜ್ಯ ಸರ್ಕಾರಗಳು ನಮ್ಮ ಮುನ್ಸೂಚನೆ ಕೇಳದೇ ಟೀಕೆ ಮಾಡುತ್ತವೆ’ ಎಂದು ಕಿಡಿಕಾರಿದರು.

ಅಲ್ಲದೆ, ‘ದಿಲ್ಲಿ ಐಐಟಿ ಈ ಹಿಂದೆ ಅಧ್ಯಯನ ನಡೆಸಿ ಕೇರಳದ ಭೂಕುಸಿತ ವಲಯ ಗುರುತಿಸಿತ್ತು. ಕೇರಳ ಸರ್ಕಾರ ಈ ಬಗ್ಗೆಯೂ ಕ್ರಮ ಜರುಗಿಸಲಲ್ಲ’ ಎಂದು ಮಾಹಿತಿ ನೀಡಿದರು.

ಇನ್ನು ಕೇರಳದಲ್ಲಿ ಸಂಭವಿಸಿದ ದುರಂತದ ಬಗ್ಗೆ ತುರ್ತು ನಿಲುವಳಿ ಸೂಚನೆಗೆ ಉತ್ತರಿಸಿದ ಅವರು, ‘ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಜು.30ರಂದು ಇನ್ನೂ ಮೂರು ಎನ್‌ಡಿಆರ್‌ಎಫ್‌ ತಂಡ ಕಳುಹಿಸಿದ್ದೇವೆ. ಮೊದಲ ಎನ್‌ಡಿಆರ್‌ಎಫ್‌ ತಂಡ ಬಂದಾಕ್ಷಣ ಕೇರಳ ಸರ್ಕಾರ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರೆ ನಷ್ಟ ಕಡಿಮೆಯಾಗುತ್ತಿತ್ತು’ ಎಂದು ತಿಳಿಸಿದರು.