ಕೇಂದ್ರ ನೌಕರರ ಡಿಎ 4% ಏರಿಕೆ: ಕೇಂದ್ರ ಸಂಪುಟ ಅಸ್ತು

| Published : Mar 08 2024, 01:45 AM IST / Updated: Mar 08 2024, 09:37 AM IST

ಸಾರಾಂಶ

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಈ ವರ್ಷದ ಜ.1ರಿಂದಲೇ ಅನ್ವಯ ಆಗುವಂತೆ ಶೇ.4ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಈ ವರ್ಷದ ಜ.1ರಿಂದಲೇ ಅನ್ವಯ ಆಗುವಂತೆ ಶೇ.4ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. 

ಇದರಿಂದಾಗಿ ಹಾಳಿ ನೌಕರರ ಡಿಎ ಹಾಗೂ ಪಿಂಚಣಿದಾರರಿಗೆ ಡಿಆರ್‌ನೆಸ್ ರಿಲೀಫ್ (ಡಿಆರ್) ಮೂಲವೇತನದ ಶೇ.46ರಿಂದ ಶೇ.50ಕ್ಕೆ ಏರಲಿದೆ.

ಇದರಿಂದ ಸರ್ಕಾರಕ್ಕೆ ವಾರ್ಷಿಕ 12,868.72 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಆದರೆ 18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. 

ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿರುವ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದೆ ಎಂದು ಸರ್ಕಾರ ಹೇಳಿದೆ.300 ರು. ಉಜ್ವಲಾ ಎಲ್‌ಪಿಜಿ ಸಬ್ಸಿಡಿ 1 ವರ್ಷ ಮುಂದುವರಿಕೆ: ಸಂಪುಟ ಅಸ್ತು

ನವದೆಹಲಿ: ಉಜ್ವಲಾ ಯೋಜನೆ ಅಡಿಯ 300 ರು. ಎಲ್‌ಪಿಜಿ ಸಬ್ಸಿಡಿ 1 ವರ್ಷ ಮುಂದುವರಿಸಲು (2024-25ನೇ ಸಾಲಿಗೆ) ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಇದರಡಿ ಫಲಾನುಭವಿಗಳಿಗೆ ಪ್ರತಿ ವರ್ಷಕ್ಕೆ 12 ರೀಫಿಲ್‌ಗಳಿಗೆ ತಲಾ 300 ರು. ಸಬ್ಸಿಡಿ ದೊರಕುತ್ತದೆ. ಮಾರ್ಚ್ 1, 2024ರ ಅಂಕಿ ಅಂಶದ ಪ್ರಕಾರ 10.27 ಕೋಟಿಗೂ ಹೆಚ್ಚು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳಿದ್ದಾರೆ. 

ಯೋಜನೆಯನ್ನು 1 ವರ್ಷ ಮುಂದುವರಿಸಿರುವ ಕಾರಣ 2024-25ರ ಆರ್ಥಿಕ ವರ್ಷಕ್ಕೆ ಒಟ್ಟು 12,000 ರು. ಸಬ್ಸಿಡಿಯನ್ನು ಸರ್ಕಾರ ನೀಡಲಿದೆ. ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಸೇನೆ, ಕರಾವಳಿ ಪಡೆಗೆ 34 ಧ್ರುವ ಕಾಪ್ಟರ್ ಖರೀದಿ: ಸಂಪುಟ ಅಸ್ತು
ನವದೆಹಲಿ: ಭಾರತೀಯ ಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ 34 ಹೊಸ ಎಎಲ್‌ಹೆಚ್ (ಲಘು) ಧ್ರುವ್ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಪ್ರಸ್ತಾವನೆಗಳಿಗೆ ಭದ್ರತಾ ವ್ಯವಹಾರಗಳ ಸಂಪುಟ ಸಮಿತಿ ಗುರುವಾರ ಅನುಮತಿ ನೀಡಿದೆ. 

ಭಾರತೀಯ ಸೇನೆಯು ಈ ಪೈಕಿ 25 ಹೆಲಿಕಾಪ್ಟರ್‌ಗಳನ್ನು ಪಡೆಯಲಿದ್ದು, ಕರಾವಳಿ ಪಡೆ 9 ಪಡೆಯಲಿದೆ. ಈ ಹೆಲಿಕಾಪ್ಟರ್‌ಗಳನ್ನು ಸಾರ್ವಜನಿಕ ವಲಯದ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ದೇಶೀಯವಾಗಿ ನಿರ್ಮಿಸಲಾಗುವುದು ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.