ಸಾರಾಂಶ
ನವದೆಹಲಿ : ಅಂಗಾಂಗ ಸಾಗಣೆಗೆ ಇರುವ ತೊಡಕುಗಳನ್ನು ನಿವಾರಿಸಲು ಪ್ರಯತ್ನಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಇದೇ ಮೊದಲ ಬಾರಿಗೆ ಅಂಗಾಂಗ ಸಾಗಣೆ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, ಅಂಗಾಂಗ ಇರುವ ಪೆಟ್ಟಿಗೆಗೆ ಮೊದಲ ಸಾಲಿನಲ್ಲೇ ವಿಮಾನಗಳು ವ್ಯವಸ್ಥೆ ಮಾಡಿಕೊಡಬೇಕು. ಅಲ್ಲದೆ, ಆದ್ಯತೆಯ ಮೇರೆಗೆ ಟೇಕಾಫ್ ಅಥವಾ ಲ್ಯಾಂಡಿಂಗ್ ಆಗಲು ವಿಮಾನ ಸಂಚಾರ ನಿಯಂತ್ರಕರ (ಎಟಿಸಿ)ನ್ನು ಕೋರಬಹುದಾಗಿದೆ.
ಮೆಟ್ರೋ ರೈಲುಗಳಲ್ಲಿ ಕೂಡ ಅಂಗಾಂಗ ಸಾಗಣೆಗೆ ಆದ್ಯತೆ ನೀಡಬೇಕು. ಅಂಗಾಂಗ ಇರುವ ಪೆಟ್ಟಿಗೆಯನ್ನು ತರುವ ವೈದ್ಯ ಸಿಬ್ಬಂದಿಯನ್ನು ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಮೆಟ್ರೋ ರೈಲಿನವರೆಗೂ ಕರೆದೊಯ್ಯಬೇಕು. ವೈದ್ಯ ಸಿಬ್ಬಂದಿಯ ಜತೆಗೆ ಮೆಟ್ರೋ ಅಧಿಕಾರಿಗಳೂ ಅವಶ್ಯವಿದ್ದರೆ ಹೋಗಬಹುದು. ಆದರೆ ಅಂಗಾಂಗ ಹೊಂದಿರುವ ಪೆಟ್ಟಿಗೆ ಸುತ್ತಮುತ್ತಲಿನ ಜಾಗವನ್ನು ನಿರ್ಬಂಧಿಸಬೇಕು ಎಂದು ಮಾರ್ಗಸೂಚಿ ವಿವರಿಸುತ್ತದೆ.
ವಿಮಾನಗಳು ಅಂಗಾಂಗ ಸಾಗಣೆಗೆ ಆದ್ಯತೆಯ ರಿಸರ್ವೇಷನ್ ಕಲ್ಪಿಸಬೇಕು. ತಡವಾಗಿ ವಿಮಾನ ಏರುವ ಅವಕಾಶವನ್ನೂ ಒದಗಿಸಬೇಕು. ವಿಮಾನದಿಂದ ಆ್ಯಂಬುಲೆನ್ಸ್‌ವರೆಗೆ ಅಂಗಾಂಗದ ಪೆಟ್ಟಿಗೆಯನ್ನು ಸಾಗಿಸಲು ಟ್ರಾಲಿ ವ್ಯವಸ್ಥೆ ಮಾಡಬೇಕು. ರನ್‌ವೇ ಬಳಿಗೇ ಆ್ಯಂಬುಲೆನ್ಸ್ ಓಡಿಸಲು ಅವಕಾಶವಿದ್ದರೆ ಅಲ್ಲೂ ಸಹಾಯ ಮಾಡಬೇಕು ಎಂದು ಹೇಳಿದೆ.