ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

| Published : Jul 23 2024, 12:42 AM IST / Updated: Jul 23 2024, 05:39 AM IST

nitish kumar

ಸಾರಾಂಶ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ: ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಪ್ರಸ್ತಾಪ ಇದೆಯೇ ಎಂಬ ಜೆಡಿಯು ಸಂಸದ ರಾಮ್‌ಪ್ರೀತ್‌ ಮಂಡಲ್‌ ಪ್ರಶ್ನಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವಾಲಯ, ವಿಶೇಷ ಸ್ಥಾನಮಾನ ನೀಡಲು ಅಗತ್ಯವಾದ ವ್ಯಾಪ್ತಿಯಲ್ಲಿ ಬಿಹಾರ ಬರುವುದಿಲ್ಲ ಎಂದು 2012ರಲ್ಲಿ ಸರ್ಕಾರ ರಚಿಸಿದ್ದ ಸಮಿತಿಯೊಂದು ವರದಿ ನೀಡಿದೆ. ಹೀಗಾಗಿ ಅಂಥ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಹೇಳಿದೆ. ಕೇಂದ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಜೆಡಿಯು ಬಜೆಟ್‌ನಲ್ಲಿ 45000 ಕೋಟಿ ರು. ವಿಶೇಷ ಅನುದಾನಕ್ಕೆ ಬೇಡಿಕೆ ಇಟ್ಟಿದೆ ಎಂಬ ವರದಿಗಳ ಬೆನ್ನಲ್ಲೇ ಸರ್ಕಾರ ಈ ಮಾಹಿತಿ ನೀಡಿದೆ. ಈ ನಡುವೆ ಸರ್ಕಾರದ ಹೇಳಿಕೆಯನ್ನು ವಿಪಕ್ಷ ಆರ್‌ಜೆಡಿ ಕಟುವಾಗಿ ಟೀಕಿಸಿದೆ.

ಕಮಲಾಗೆ ಭಾರತ ಮೂಲದ ಸಂಸದರ ಬೆಂಬಲ: ಒಬಾಮಾ ಇನ್ನೂ ಮೌನ

ವಾಷಿಂಗ್ಟನ್‌: ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್‌ ಹೆಸರು ಶಿಫಾರಸು ಮಾಡಿದ ಜೋ ಬೈಡೆನ್ ಕ್ರಮವನ್ನು ಭಾರತೀಯ ಮೂಲದ ಅಮೆರಿಕನ್‌ ಸಂಸದರಾದ ಭಾರತ ಮೂಲದ ಶಾಸಕರಾದ ರಾಜಾ ಕೃಷ್ಣಮೂರ್ತಿ, ರಾವ್‌ ಖನ್ನಾ, ಥಾಣೆದಾರ್‌, ಪ್ರಮೀಳಾ ಜಯಪಾಲ್, ಅಮಿ ಬೆರಾ ಬೆಂಬಲಿಸಿದ್ದಾರೆ. ಮತ್ತೊಂದೆಡೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಕೂಡ ಬೈಡೆನ್ ನಡೆಗೆ ಮೆಚ್ಚುಗೆ ಸೂಚಿಸಿದರೂ, ಹ್ಯಾರಿಸ್‌ ಸ್ಪರ್ಧೆಯನ್ನು ಅನುಮೋದಿಸಿಲ್ಲ. 

ಹ್ಯಾರಿಸ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಬಹುತೇಕ ಖಚಿತವಾದರೂ ಕೂಡ ಶಿಕಾಗೋದಲ್ಲಿ ಮುಂದಿನ ತಿಂಗಳು ನಡೆಯಲಿರುವ ಡೆಮಾಕ್ರೆಟಿಕ್ ಪಕ್ಷದ ನ್ಯಾಷನಲ್ ಕನ್ವೆನ್ಶನ್ ಅಧ್ಯಕ್ಷೀಯ ಸ್ಥಾನದ ನಾಮ ನಿರ್ದೇಶನ ಚುನಾವಣೆಯಲ್ಲಿ ಗೆದ್ದ ನಂತರವೇ ಅಂತಿಮವಾಗುತ್ತದೆ.

ಹೋಟೆಲ್‌ ಮಾಲೀಕರ ಹೆಸರು ಪ್ರದರ್ಶನ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಕಾವಾಡಿ ಯಾತ್ರೆ ಮಾರ್ಗದಲ್ಲಿ ಹೋಟೆಲ್ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕೆಂದು ಆದೇಶ ಹೊರಡಿಸಿದ್ದ ಉತ್ತರಪ್ರದೇಶ, ಉತ್ತರಾಖಂಡ ಸರ್ಕಾರ ಮತ್ತು ದೇಗುಲದ ನಗರಿ ಉಜ್ಜಯನಿಯಲ್ಲಿ ಎಲ್ಲಾ ಅಂಗಡಿ ಮಾಲೀಕರು ತಮ್ಮ ಹೆಸರು ಪ್ರಕಟಿಸಬೇಕೆಂದು ಆದೇಶ ಹೊರಡಿಸಿದ್ದ ಮಧ್ಯಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಹೋಟೆಲ್ ಮಾಲೀಕರ ಹೆಸರಿನ ಬದಲು ತಿನಿಸುಗಳ ಪಟ್ಟಿ ಪ್ರಕಟಿಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ.ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ‘ತಿನ್ನುವವರಿಗೆ ಹೋಟೆಲ್‌ನಲ್ಲಿ ತಿನಿಸುಗಳು ಸಸ್ಯಹಾರವೋ? ಮಾಂಸಹಾರವೋ ಎನ್ನುವುದನ್ನು ಪ್ರದರ್ಶಿಸುವ ಅಗತ್ಯವಿರಬಹುದು’ ಎಂದಿದೆ.

‘ಸರ್ಕಾರದ ಆದೇಶವನ್ನು ತಡೆ ನೀಡುವ ಮಧ್ಯಂತರ ಆದೇಶವನ್ನು ಜಾರಿಗೊಳಿಸುತ್ತೇವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಹೋಟೆಲ್ ಮಾಲೀಕರ , ತಿನಿಸುಗಳ ಹೆಸರನ್ನು ಪ್ರದರ್ಶಿಸುವ ಅಗತ್ಯವಿರುತ್ತದೆ. ಆದರೆ ಮಾಲೀಕರ ಹೆಸರು ಹಾಗೂ ಸಿಬ್ಬಂದಿಗಳ ಹೆಸರನ್ನು ಪ್ರದರ್ಶಿಸುವಂತೆ ಒತ್ತಾಯಿಸುವಂತಿಲ್ಲ’ ಎಂದು ನ್ಯಾಯಾಲಯ ಹೇಳಿದೆ.ಅನ್ಯ ಧರ್ಮೀಯರು ಹಿಂದೂ ಹೆಸರಿಟ್ಟುಕೊಂಡು ತಮ್ಮ ಹೋಟೆಲ್‌ಗಳಲ್ಲಿ ಮಾಂಸಾಹಾರ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕಾವಡಿ ಯಾತ್ರೆಗೆ ತೆರಳುವವರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವ ಕಾರಣ ಎರಡೂ ಸರ್ಕಾರಗಳು, ಹೋಟೆಲ್‌ ಮುಂದೆ ಮಾಲೀಕರ ಹೆಸರು ಪ್ರಕಟ ಕಡ್ಡಾಯ ಮಾಡಿದ್ದವು.